ಕಬ್ಬಾಳು ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ

ಅಕ್ಷರಮಿತ್ರ ಸುದ್ದಿಲೋಕ.

ಶ್ರವಣಬೆಳಗೊಳ: ಹೋಬಳಿಯ ಕಬ್ಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಎ.ಸಿ.ಇಂದಿರಾ ಅವರು 2026–27ನೇ ಸಾಲಿನ ಹಾಸನ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಸತತ 34 ವರ್ಷಗಳ ಕಾಲ ಸಲ್ಲಿಸಿರುವ ಶ್ಲಾಘನೀಯ ಸೇವೆಯನ್ನು ಗುರುತಿಸಿ ಶಿಕ್ಷಣ ಇಲಾಖೆ ಈ ಗೌರವಕ್ಕೆ ಅವರನ್ನು ಆಯ್ಕೆ ಮಾಡಿದೆ. ಹಾಸನದ ಕಲಾಭವನದಲ್ಲಿ ಶನಿವಾರ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗುವುದು.

ಶ್ರವಣಬೆಳಗೊಳ ಹೋಬಳಿಯ ಹಡೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 12 ವರ್ಷ, ಶ್ರವಣಬೆಳಗೊಳದಲ್ಲಿ 11 ವರ್ಷ ಹಾಗೂ ಕಬ್ಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ವರ್ಷ ಸೇರಿದಂತೆ ಒಟ್ಟು 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಇಂದಿರಾ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದಾರೆ.

ಇದಕ್ಕೂ ಮುನ್ನ 2002ನೇ ಸಾಲಿನಲ್ಲಿ ‘ಜನ ಮೆಚ್ಚಿದ ಶಿಕ್ಷಕಿ’ ಪ್ರಶಸ್ತಿಗೂ ಅವರು ಆಯ್ಕೆಯಾಗಿದ್ದರು. ಇದೀಗ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅವರ ಶೈಕ್ಷಣಿಕ ಸೇವೆಗೆ ಮತ್ತೊಂದು ಗರಿ ಮೂಡಿಸಿದೆ. 

ಅವರ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಚ್.ಸತೀಶ್, ಬಿ.ಆರ್‌.ಸಿ. ಅನಿಲ್, ಶಿಕ್ಷಣ ಸಂಯೋಜಕರಾದ ಯಾದವರಾಜು, ಶ್ರೀನಿವಾಸ್, ಸಿ.ಆರ್‌.ಪಿ. ಯೋಗೇಶ್, ರಾಜ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಪಿ.ಟಿ.ಮಂಜೇಶ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎನ್.ಗೋಪಾಲ್, ಈಟಿವಿ ಭಾರತ್ ವರದಿಗಾರ ಸುನೀಲ್ ಕುಂಭೇನಹಳ್ಳಿ ಸೇರಿದಂತೆ ಪದಾಧಿಕಾರಿಗಳು, ಕನ್ನಡ9 ವಾಹಿನಿ ಮತ್ತು ಅಕ್ಷರಮಿತ್ರ ದಿನಪತ್ರಿಕೆಯ ಕಚೇರಿ ಸಿಬ್ಬಂದಿ ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

 

ಶಾಲೆಯ ಶಿಕ್ಷಕರಾದ ಲಕ್ಷ್ಮಿ ನರಸಿಂಹಮೂರ್ತಿ, ಲಿಂಗರಾಜು, ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ಹಾಗೂ ಸದಸ್ಯರು ಇಂದಿರಾ ಅವರ ಸಾಧನೆಗೆ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *