Share this... Whatsapp Facebook Pinterest Twitter Linkedin Gmail Print www.aksharamitra.com 25 ವರ್ಷಗಳ ರಾಜಕೀಯ ಪಯಣಕ್ಕೆ ಕೆ.ಎಂ. ಶಿವಲಿಂಗೇಗೌಡಗೆ ಸಚಿವ ಸ್ಥಾನದ ಮುಕುಟ ಹಾಸನ: ಸುಮಾರು 25 ವರ್ಷಗಳ ಸಕ್ರಿಯ ರಾಜಕೀಯ ಜೀವನದ ಬಳಿಕ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರಿಗೆ ಮೊದಲ ಬಾರಿಗೆ ಸಚಿವ ಸ್ಥಾನ ಲಭಿಸಿದೆ. ಇದರೊಂದಿಗೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಸಚಿವರಾಗಿರುವ ಮೊದಲ ಶಾಸಕರಾಗಿ ಅವರು ಹೊಸ ಇತಿಹಾಸ ನಿರ್ಮಿಸಿದ್ದಾರೆ. 68 ವರ್ಷದ ಶಿವಲಿಂಗೇಗೌಡ ಅವರು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕುಡುಕುಂದಿ ಗ್ರಾಮದ ಕೃಷಿಕ ಕುಟುಂಬದಲ್ಲಿ 1958ರ ಫೆಬ್ರುವರಿ 14ರಂದು ಜನಿಸಿದರು. ತಂದೆ ಮಂಜೇಗೌಡ ಹಾಗೂ ತಾಯಿ ದ್ಯಾವಮ್ಮ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ವಂತ ತಾಲೂಕಿನಲ್ಲೇ ಪೂರ್ಣಗೊಳಿಸಿದ ಅವರು, 1980ರಲ್ಲಿ ಹಾಸನ ಸರ್ಕಾರಿ ಕಲಾ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಕೃಷಿಯನ್ನೇ ಮುಖ್ಯ ವೃತ್ತಿಯಾಗಿಸಿಕೊಂ ಡಿರುವ ಅವರು ಪತ್ನಿ ಎಚ್.ಡಿ. ಪುಷ್ಪಾವತಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ. ಜೆಡಿಎಸ್ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ಶಿವಲಿಂಗೇಗೌಡ ಅವರು 2001ರಿಂದ 2006ರವರೆಗೆ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. 2004ರ ವಿಧಾನಸಭೆ ಚುನಾವಣೆಯಲ್ಲಿ ಆಗಿನ ಗಂಡಸಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಬಿ. ಶಿವರಾಂ ವಿರುದ್ಧ ಕೇವಲ 18 ಮತಗಳ ಅಂತರದಿಂದ ಸೋಲು ಕಂಡರು. ಬಿ. ಶಿವರಾಂ 52,781 ಮತ ಪಡೆದಿದ್ದರೆ, ಶಿವಲಿಂಗೇಗೌಡ 52,763 ಮತಗಳನ್ನು ಗಳಿಸಿದ್ದರು. ನಂತರ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಗಂಡಸಿ ಕ್ಷೇತ್ರ ಅರಸೀಕೆರೆ ಕ್ಷೇತ್ರಕ್ಕೆ ವಿಲೀನಗೊಂಡಿತು. 2008ರ ಚುನಾವಣೆಯಲ್ಲಿ ಅರಸೀಕೆರೆಯಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಅವರು, ನಂತರ ನಡೆದ ನಾಲ್ಕು ವಿಧಾನಸಭೆ ಚುನಾವಣೆಗಳಲ್ಲೂ ಸತತವಾಗಿ ಗೆಲುವು ಸಾಧಿಸಿ ಸೋಲಿಲ್ಲದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2023ರ ವಿಧಾನಸಭೆ ಚುನಾವಣೆಗೆ ಮುನ್ನ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಶಿವಲಿಂಗೇಗೌಡ, ಹೊಸ ಪಕ್ಷದಲ್ಲಿಯೂ ಗೆಲುವು ಸಾಧಿಸುವ ಮೂಲಕ ಸತತ ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶಿಸಿದರು. ಪ್ರಸ್ತುತ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿದ್ದ ಅವರು, ಇದೀಗ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಚುನಾವಣಾ ಸಾಧನೆ 2008: 74,025 ಮತಗಳು – ಜಯ (ಜೆಡಿಎಸ್) 2013: 76,579 ಮತಗಳು – ಜಯ (ಜೆಡಿಎಸ್) 2018: 93,986 ಮತಗಳು – ಜಯ (ಜೆಡಿಎಸ್) 2023: 98,375 ಮತಗಳು – ಜಯ (ಕಾಂಗ್ರೆಸ್) 25 ವರ್ಷಗಳ ರಾಜಕೀಯ ಅನುಭವದ ಬಳಿಕ ಸಚಿವ ಸ್ಥಾನ ಅಲಂಕರಿಸಿರುವ ಶಿವಲಿಂಗೇಗೌಡ ಅವರ ನೇಮಕಾತಿ ಅರಸೀಕೆರೆ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಅವರ ಸಚಿವ ಸ್ಥಾನದಿಂದ ಕ್ಷೇತ್ರದ ಅಭಿವೃದ್ಧಿ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿವೆ. Share this... Whatsapp Facebook Pinterest Twitter Linkedin Gmail Print Post navigation ಒಂದು ಚಿತ್ರ ಸಾವಿರ ಪದಕ್ಕೆ ಸಮ-ಮಂಜುನಾಥ್ ಇಂದು ಉದ್ಯೋಗ ಮೇಳ