ಹೊಳೆನರಸೀಪುರ: ನಮ್ಮ ಕಾಂಗ್ರೆಸ್ ಪಕ್ಷದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಸಲುವಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಟಿ ಲಕ್ಷ್ಮಣ ತಿಳಿಸಿದರು.

ನಮ್ಮ ವಾಟ್ಸಪ್ ಚಾನಲ್ ಫಾಲೋ ಮಾಡಿ:

ಪಟ್ಟಣದ ಕಾಂಗ್ರೆಸ್ ಭವನದ ಸಭಾಂಗಣದಲ್ಲಿ ಸಂಸದ ಶ್ರೇಯಸ್ ಎಂ ಪಟೇಲ್, ಕೆಪಿಸಿಸಿ ಸದಸ್ಯೆ ಅನುಪಮಾ ಮಹೇಶ್ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದ 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು ಆ ಹೋರಾಟಗಾರರ ಪರಿಶ್ರಮವನ್ನು ಸದಾ ನೆನಪು ಮಾಡಿಕೊಳ್ಳುವುದರ ಮೂಲಕ ಅವರ ತ್ಯಾಗವನ್ನು ಸದಾ ಸ್ಮರಿಸಬೇಕು. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ವಿಷಯದಲ್ಲಿ ವಿಭಿನ್ನವಾಗಿ ಹೋರಾಟವನ್ನು ರೂಪಿಸುವುದರ ಮೂಲಕ ಅದರಲ್ಲಿ ಯಶಸ್ಸು ಕಂಡಿತು. ನಮ್ಮ ದೇಶ ಎಲ್ಲ ಹಂತದಲ್ಲಿಯೂ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಇಡೀ ವಿಶ್ವಕ್ಕೆ ಮಾದರಿಯಾದ ನಮ್ಮ ಸಂವಿಧಾನ , ಪ್ರಜಾಪ್ರಭುತ್ವ, ಸಮಾನತೆ ಪ್ರಬಲವಾಗಿ ನೆಲೆಯೂರ ಬೇಕು ಎಂದರು.

ಇದನ್ನು ಓದಿರಿ: ಭಾರತೀಯರ-ಸ್ವಾಭಿಮಾನಿ-ಜೀವಾಳವನ್ನು ಹೊಸಕಿ ಹಾಕಲು ಬ್ರಿಟಿಷರಿಂದಲೂ ಸಾಧ್ಯವಾಗಲಿಲ್ಲ.

ಸಂವಿಧಾನವನ್ನು ಸಂರಕ್ಷಿಸುವ, ಜೋಪಾನವಾಗಿ ಕಾಪಾಡುವ ಆ ಮೂಲಕ ಪ್ರಜಾಪ್ರಭುತ್ವವನ್ನು ರಕ್ಷಿಸುವ , ಸಮಾನತೆಯನ್ನು ಸಾರುವ ವಿಷಯದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರುಗಳು ವಿಶೇಷವಾಗಿ ಕಾಳಜಿ ವಹಿಸಿದ್ದಾರೆ. ಅದೇ ರೀತಿ ನಮ್ಮ ರಾಜ್ಯದಲ್ಲಿ ಕೋಟ್ಯಂತರ ಕನ್ನಡಿಗರು ಪಕ್ಷಾತೀತವಾಗಿ, ಜಾತ್ಯತೀತವಾಗಿ ಸರ್ಕಾರದ ವತಿಯಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಳ್ಳುವ ದೃಷ್ಟಿಯಿಂದ ನಮ್ಮ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಇಡೀ ದೇಶ ಮೆಚ್ಚುವಂತಹ ಒಪ್ಪುವಂತಹ ಆ ಮೂಲಕ ಅನುಸರಿಸುವಂತಹ ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು.

ಜಿಲ್ಲೆಯಲ್ಲಿ ಕಳೆದ ಮೂರು ದಶಕದಿಂದ ಶ್ರೇಯಸ್ ಎಂ. ಪಟೇಲ್ ಸಂಸದರಾದ ನಂತರ ನಮ್ಮ ಜಿಲ್ಲೆಯಲ್ಲಿ ಉಸಿರು ಕಟ್ಟಿದ ವಾತಾವರಣದಿಂದ ಜಿಲ್ಲೆಯ ಜನರು, ಬಂದಾಮುಕ್ತರಾಗುತ್ತಿದ್ದಾರೆ. ಸ್ವತಂತ್ರವಾಗಿ, ಸಂವಿಧಾನ ಬದ್ಧವಾಗಿ, ನಿಯಮಾನುಸಾರ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಮುಂದಾಗಿರುವುದು ಸಮಾಧಾನ ತಂದುಕೊಡುವ ವಿಷಯ ಎಂದು ತಿಳಿಸಿದರು.

ಇದೆ ವೇಳೆ ಶ್ರೀ ಜಯಚಾಮರಾಜೇಂದ್ರ ವೃತ್ತದ ಮೂಲಕ ಮೆರವಣಿಗೆಯಲ್ಲಿ ಸಾಗಿದ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ತಂಪು ಪಾನೀಯ ವಿತರಿಸಲಾಯಿತು.

ಈ ವೇಳೆ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿಯ ತಾಲೂಕು ಅಧ್ಯಕ್ಷ ಶಿವಕುಮಾರ, ಸದಸ್ಯ ಗೋವಿಂದರಾಜು, ಕೆ.ಡಿ.ಪಿ. ಸದಸ್ಯ ಕೆ.ಕೆ.ಲೋಕೇಶ್, ಬಾಬರ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಜಾಹಿದ್ ಪಾಷಾ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಲ್ಲೇಶ್, ಕೇಶವಮೂರ್ತಿ, ದೇವರಾಜು, ನಬಿ, ಎನ್ ಎಸ್ ಯು ಐ ನ ಪರಮೇಶ್, ಸುಮಂತ್, ಲಲಿತಾ, ಮಹೇಶ್, ಯುವ ಕಾಂಗ್ರೆಸ್ ನ ಚಂದು, ಉಮೇಶ್, ಶೇಖರ್, ರಾಘವೇಂದ್ರ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೃಷ್ಣೆಗೌಡ ಸೇರಿದಂತೆ ನೂರಾರು ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಹಾಜರಿದ್ದರು.

Leave a Reply

Your email address will not be published. Required fields are marked *