Share this... Whatsapp Facebook Pinterest Twitter Linkedin Gmail Printಮಕ್ಕಳಲ್ಲಿ ದೇಶಾಭಿಮಾನ ಮೂಡಿಸೋಣ : ಜಿ.ಜಿ.ಜೆ.ಸಿ ಪ್ರಧಾನ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಸನ : ಭಾರತ ದೇಶ ಬ್ರಿಟೀಷರ ದಾಸ್ಯದಿಂದ ಮುಕ್ತಿ ಪಡೆದ ದಿನ. ಭಾರತೀಯರು ತಮ್ಮ ಸ್ವಾಭಿಮಾನವನ್ನು ಹಕ್ಕನ್ನಾಗಿಸಿಕೊಂಡ ದಿನವೇ ಇಂದು ನಾವು ಆಚರಿಸುತ್ತಿರುವ ಸ್ವಾತಂತ್ರ್ಯ ದಿನ. ಇಂದು ಮಕ್ಕಳಲ್ಲಿ ದೇಶಾಭಿಮಾನವನ್ನು ಮೂಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ನಮ್ಮ ದೇಶವು ಇಂದು ವಿಭಿನ್ನ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆಯನ್ನು ಮಾಡುತ್ತಾ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿರುವುದು ಇಡೀ ವಿಶ್ವವೇ ಬೆರಗಾಗಿ ನಿಂತು ನೋಡುತ್ತಿದೆ ಎಂದು ಉಪಪ್ರಾಂಶುಪಾಲರಾದ ಮಂಜುನಾಥ್ ಹೇಳಿದರು. ಜಾಹೀರಾತು ನಗರದ ಆರ್.ಸಿ. ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರಧಾನ), ಪ್ರೌಢಶಾಲಾ ವಿಭಾಗದಿಂದ ನೆರವೇರಿದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿವೃಂದವನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನ ಪ್ರೌಢ ಶಾಲೆಯು ಕಳೆದ ನಾಲ್ಕೈದು ವರ್ಷಗಳಿಂದ ಉತ್ತಮ ಫಲಿತಾಂಶವನ್ನು ಪಡೆಯುತ್ತಿದ್ದು, ಉತ್ತಮ ಪ್ರತಿಷ್ಠಿತ ಶಾಲೆಯಾಗಿದೆ. ಸರ್ಕಾರಿ ಶಾಲೆಯನ್ನು ಉಳಿಸುವ ಸಲುವಾಗಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಇರುವುದು ಸಂತಸದ ಸಂಗತಿಯಾಗಿದೆ ಎಂದರು. ಜಾಹೀರಾತು ಶಾಲೆಯ ಸಮಾಜ ವಿಜ್ಞಾನ ವಿಷಯ ಶಿಕ್ಷಕರಾದ ಕೆ.ಎನ್. ಚಿದಾನಂದರವರು ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಾ ನಮ್ಮ ದೇಶ ಭಾರತವು ಎಪ್ಪತ್ತೊಂಬತ್ತು ವರ್ಷಗಳನ್ನು ಪೂರೈಸಿ ಇಂದು ಎಂಬತ್ತನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಭಾರತವು ಒಂದು ಧ್ಯೇಯ ವಾಕ್ಯವನ್ನು ಹೊಂದಿದ್ದು, ಅದು “ಯುವಶಕ್ತಿ ಫಾರ್ ವಿಕಸಿತ್ ಭಾರತ್@2047” ಎಂದಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಹಿನ್ನೆಲೆಯನ್ನು ನೋಡುವುದಾದರೆ, ನಮ್ಮ ದೇಶಕ್ಕೆ ವ್ಯಾಪಾರದ ಮನೋಧೋರಣೆಯಿಂದ ತಕ್ಕಡಿ ಹಿಡಿದು ಬಂದ ಈಸ್ಟ್ ಇಂಡಿಯಾ ಕಂಪನಿಯು, ಭಾರತೀಯರಲ್ಲಿದ್ದ ಒಗ್ಗಟ್ಟಿನ ಕೊರತೆಯನ್ನು ಬಂಡವಾಳ ಮಾಡಿಕೊಂಡು ಸಂಪೂರ್ಣ ರಾಷ್ಟ್ರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಸುಮಾರು ಎರಡು ಶತಮಾನಗಳ ಅವಧಿಯಲ್ಲಿ ಬ್ರಿಟಿಷರು ಭಾರತದ ಸಂಪತ್ತನ್ನು ದೋಚಿದರು, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಜ್ಜುಗುಜ್ಜು ಮಾಡಿದರು. ಆದರೆ, ಭಾರತೀಯರ ಸ್ವಾಭಿಮಾನಿ ಜೀವಾಳವನ್ನು ಹೊಸಕಿಹಾಕಲು ಅವರಿಂದ ಸಾಧ್ಯವಾಗಲಿಲ್ಲ. 1857ರ ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ (ಸಿಪಾಯಿ ದಂಗೆ) ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನೇ ಅಲ್ಲಾಡಿಸಿತು. ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಮತ್ತು 1942ರ ‘ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ) ಚಳವಳಿಗಳು ಜನಸಾಮಾನ್ಯರನ್ನು ಒಂದೇ ವೇದಿಕೆಯಡಿ ತಂದವು. ಸತ್ಯ, ಅಹಿಂಸೆ ಮತ್ತು ಉಪವಾಸ ಸತ್ಯಾಗ್ರಹಗಳೇ ಆಯುಧಗಳಾದವು. ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ರಾಜಗುರು, ಸುಖ್ದೇವ್, ಚಂದ್ರಶೇಖರ್ ಆಜಾದ್ ಅವರಂತಹ ಯುವ ನಾಯಕರು ಶಸ್ತ್ರಸಜ್ಜಿತ ಹೋರಾಟದ ಮೂಲಕ ಬ್ರಿಟಿಷರ ನಿದ್ದೆಗೆಡಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್, ಪಂಡಿತ್ ಜವಾಹರಲಾಲ್ ನೆಹರೂ, ಡಾ. ಬಿ.ಆರ್. ಅಂಬೇಡ್ಕರ್, ಮೌಲಾನಾ ಅಬುಲ್ ಕಲಾಮ್ ಆಜಾದ್ ಮುಂತಾದ ನಾಯಕರ ನಿರಂತರ ಶ್ರಮದ ಫಲವಾಗಿ ಬ್ರಿಟಿಷರು ಭಾರತವನ್ನು ತೊರೆಯಲೇಬೇಕಾದ ಪರಿಸ್ಥಿತಿ ಬಂತು. ಅಂತಿಮವಾಗಿ 1947 ಆಗಸ್ಟ್ 15 ರಂದು ದೇಶವು ಸ್ವತಂತ್ರವಾಯಿತು ಎಂದರು. ಮುಂದುವರಿದು ಮಾತನಾಡುತ್ತಾ “ಸ್ವಾತಂತ್ರ್ಯ ಎಂಬುದು ನಮಗೆ ಉಚಿತವಾಗಿ ಸಿಕ್ಕಿದ ವಸ್ತುವಲ್ಲ ; ಅದು ನಮಗೆ ನೀಡಲ್ಪಟ್ಟ ಮಹತ್ತರ ಜವಾಬ್ದಾರಿ.” ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ. ನಮಗೆ ಸಿಕ್ಕಿರುವ ಈ ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ವೀರರ ತ್ಯಾಗ ಮತ್ತು ರಕ್ತದ ಹನಿಗಳಿವೆ. ಅವರ ತ್ಯಾಗವನ್ನು ಸ್ಮರಿಸುವುದು ಮತ್ತು ದೇಶದ ಗೌರವವನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ ಎಂದರು. ಇಂದು ಭಾರತದ ಮುಂದಿರುವ ಸವಾಲುಗಳನ್ನು ಎದುರಿಸಿ, ಪ್ರಗತಿಯತ್ತ ಸಾಗಬೇಕಿದೆ. ಅದಕ್ಕಾಗಿ ನಾವೆಲ್ಲರೂ ಪರಿಸರ ಸಂರಕ್ಷಣೆ, ಆರೋಗ್ಯ ಸಂರಕ್ಷಣೆ, ಗುಣಮಟ್ಟದ ಶಿಕ್ಷಣ ಪಡೆಯುವುದು ಅಗತ್ಯವಾಗಿದೆ ಎಂದರು. ಧ್ವಜಾರೋಹಣ ನೆರವೇರಿಸಿದ ಪ್ರಾಂಶುಪಾಲರಾದ ಅನ್ನಪೂರ್ಣ ರವರು ಸರ್ವರಿಗೂ ಸಂದೇಶವನ್ನು ನೀಡಿದರು. ಕನ್ನಡ ಭಾಷಾ ಶಿಕ್ಷಕರಾದ ರುದ್ರೇಶ್ ರವರು ಕಾರ್ಯಕ್ರಮ ನಿರೂಪಿಸಿದರು. ಸಂಗೀತ ಶಿಕ್ಷಕರಾದ ಸತ್ಯನಾರಾಯಣ ಮುರಳಿಯವರ ಮಾರ್ಗದರ್ಶನದಲ್ಲಿ ಮಕ್ಕಳ ತಂಡ ರಾಷ್ಟ್ರಗೀತೆ, ರೈತಗೀತೆ ಮತ್ತು ನಾಡಗೀತೆಗಳನ್ನು ಹಾಡಿದರು. ಹಿರಿಯ ಶಿಕ್ಷಕರಾದ ಹೆಚ್.ಪಿ. ಮಂಜುಳ, ಎ.ವಿ. ಗೀತಾರಾಣಿ, ಎಸ್.ಕೆ. ಪೂರ್ಣಿಮಾ, ಮಧು ಪಿ., ತೈಬಾಕೌಸರ್, ಚಿದಾನಂದ ಮತ್ತು ಕಾಲೇಜು ಉಪನ್ಯಾಸಕ ವೃಂದ ಬಿ.ಇಡಿ.ಪ್ರಶಿಕ್ಷಣಾರ್ಥಿಗಳು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. Share this... Whatsapp Facebook Pinterest Twitter Linkedin Gmail Print Post navigation ನನ್ನ ಮುಂದೆ ಅಭಿವೃದ್ಧಿಗಳಿವೆ, ಸಂಘರ್ಷಗಳಿಲ್ಲ ಉಸ್ತುವಾರಿ ಸಚಿವ 80ನೇ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ