Share this... Whatsapp Facebook Pinterest Twitter Linkedin Gmail Printನಾನು ಯಾರೊಂದಿಗೂ ಸಂಘರ್ಷಕ್ಕೆ ಇಳಿಯಲ್ಲ; ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಗುವೆ: ಕೆ.ಎಂ.ಶಿವಲಿಂಗೇಗೌಡ ಹಾಸನ: ನಾನು ಯಾರೊಂದಿಗೂ ಸಂಘರ್ಷಕ್ಕೆ ಇಳಿಯುವುದಿಲ್ಲ. ಅಭಿವೃದ್ಧಿಯನ್ನೇ ನನ್ನ ಮೂಲಮಂತ್ರವಾಗಿಸಿಕೊಂಡು ಕೆಲಸ ಮಾಡುತ್ತೇನೆ. ಮುಂದೆಯೂ ಯಾರ ಮೇಲೂ ದ್ವೇಷ ಸಾಧಿಸದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹೇಳಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದರೂ ತಾವು ಯಾರೊಂದಿಗೂ ಸಂಘರ್ಷಕ್ಕೆ ಇಳಿದಿಲ್ಲ. ಕ್ಷೇತ್ರದ ಜನತೆ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ನಿರಂತರವಾಗಿ ಆಶೀರ್ವಾದ ಮಾಡಿಕೊಂಡು ಬರುತ್ತಿದ್ದಾರೆ. ಇದೇ ರೀತಿಯಲ್ಲಿ ಮುಂದೆಯೂ ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಹಲವು ಪ್ರಮುಖ ಯೋಜನೆಗಳು ವಿವಿಧ ಕಾರಣಗಳಿಂದ ನೆನೆಗುದಿಗೆ ಬಿದ್ದಿವೆ. ಇವುಗಳನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಒಂದು ವರ್ಷದೊಳಗೆ ಸಾಧ್ಯವಾದಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅನುದಾನದ ಕೊರತೆಯಿಂದ ಮಂದಗತಿಯಲ್ಲಿ ಸಾಗುತ್ತಿದೆ. ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ಒದಗಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಕಾಮಗಾರಿಯೂ ನಿಧಾನಗತಿಯಲ್ಲಿ ಸಾಗುತ್ತಿದ್ದು, ಆರ್ಥಿಕ ಹೊರೆ ಇದ್ದರೂ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚಿಸಿ ಅಗತ್ಯ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದರು. ಹಾಸನಕ್ಕೆ ಐಐಟಿ ತರಲು ಪಕ್ಷಾತೀತ ಹೋರಾಟ: ಹಾಸನ ಜಿಲ್ಲೆಗೆ ಐಐಟಿ ಮಂಜೂರು ಮಾಡಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಪ್ರಯತ್ನ ನಡೆಸಲಾಗುವುದು. ಐಐಟಿಗಾಗಿ ಈಗಾಗಲೇ ಜಾಗ ಮೀಸಲಿಟ್ಟಿದ್ದರೂ ಇದುವರೆಗೆ ಮಂಜೂರಾತಿ ದೊರೆತಿಲ್ಲ. ಸಂಸದ ಶ್ರೇಯಸ್ ಪಟೇಲ್ ಅವರು ಈ ವಿಚಾರವನ್ನು ಸಂಸತ್ನಲ್ಲಿ ಎರಡು ಬಾರಿ ಪ್ರಸ್ತಾಪಿಸಿದ್ದಾರೆ. ಆದರೆ ಕೇಂದ್ರದಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ ಎಂದರು. ಹಾಸನಕ್ಕೆ ಐಐಟಿ ತರಲು ಜಿಲ್ಲೆಯ ವಿವಿಧ ಪಕ್ಷಗಳ ನಾಯಕರು ಪಕ್ಷಭೇದ ಮರೆತು ಒಂದಾಗಬೇಕು. ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಕರೆದರೂ ಯಾವುದೇ ದ್ವೇಷವಿಲ್ಲದೆ ಅವರೊಂದಿಗೆ ಕೈಜೋಡಿಸಲು ಸಿದ್ಧನಿದ್ದೇನೆ. ಜಿಲ್ಲೆಯ ಬುದ್ಧಿಜೀವಿಗಳು, ಶಿಕ್ಷಣ ತಜ್ಞರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಒಳಗೊಂಡ ಪ್ರತ್ಯೇಕ ವೇದಿಕೆ ರಚಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಅಗತ್ಯವಿದ್ದರೆ ಎಲ್ಲರೂ ಸೇರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಐಐಟಿ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗುವುದು ಎಂದರು. ವಿಮಾನ ನಿಲ್ದಾಣ ಕಾಮಗಾರಿ ವೇಗಕ್ಕೆ ಕ್ರಮ: ಹಾಸನ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿ 15 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆ ನಡೆಯುತ್ತಿದ್ದು, ರಾಜ್ಯ ಸರ್ಕಾರದಿಂದ ಒದಗಿಸಬೇಕಾದ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕೇಂದ್ರದಿಂದ ದೊರೆಯಬೇಕಾದ ಅನುದಾನದ ಬಗ್ಗೆಯೂ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳದೆ ಅರ್ಧಕ್ಕೆ ನಿಂತಿರುವ ಎಲ್ಲ ಪ್ರಮುಖ ಯೋಜನೆಗಳನ್ನು ಪುನರಾರಂಭಿಸಿ ಪೂರ್ಣಗೊಳಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು. ಹಾಸನಾಂಬ ಜಾತ್ರೆ: ಲೋಪವಿಲ್ಲದೆ ಆಯೋಜನೆ: ಹಾಸನದ ಅಧಿದೇವತೆ ಹಾಸನಾಂಬ ದೇವಿ ಜಾತ್ರಾ ಮಹೋತ್ಸವವನ್ನು ಕಳೆದ ವರ್ಷದ ಮಾದರಿಯಲ್ಲೇ ಯಾವುದೇ ಲೋಪದೋಷಗಳಿಲ್ಲದೆ ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ಸಿದ್ಧತೆ ನಡೆಸಲಿದೆ ಎಂದು ಸಚಿವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ್, ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಾಹಣಾಧಿಕಾರಿ ಶುಭಂ ಶುಕ್ಲ ಹೂಡಾ ಅಧ್ಯಕ್ಷ ಗಂಡಸಿ ಶಿವಪ್ಪ, ಸೇರಿದಂತೆ ಅಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು. Share this... Whatsapp Facebook Pinterest Twitter Linkedin Gmail Print Post navigation ಅಕ್ರಮವಾಗಿ ಬಿಲ್ಲೆಟ್ಸ್ ಸಾಗಿಸುತ್ತಿದ್ದ ವಾಹನ ವಶ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸೋಣ: ಮಂಜುನಾಥ್