ಕಾವೇರಿ ವಿಷಯ ಬಿಟ್ಟು ಖರ್ಗೆ, ವೇಣುಗೋಪಾಲ್, ಸುರ್ಜೀವಲಾ ಮನೆ ಗೇಟ್ ಕಾಯುತ್ತಿದ್ದಾರೆ!!

ನವದೆಹಲಿ: ರಾಜ್ಯ ಸರ್ಕಾರದ ಹಣೆಬರಹ ಎಲ್ಲಿಗೆ ಬಂದು ನಿಂತಿದೆ ಎಂದರೆ, ದಿನ ಬೆಳಗಾದರೆ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಮತ್ತು ರಂದೀಪ್ ಸಿಂಗ್ ಸುರ್ಜೀವಾಲ ಅವರ ಮನೆಗಳ ಗೇಟುಗಳನ್ನು ಕಾಯುವುದೇ ಇವರ ಕೆಲಸ ಆಗಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು .

ನವದೆಹಲಿಯಲ್ಲಿ ಮಾತನಾಡಿದ ಅವರು ಮೂರು ವರ್ಷಗಳ ಕಾಲ ಮುಖ್ಯಮಂತ್ರಿ ಕುರ್ಚಿಗಾಗಿ ಕಾದಾಟ ನಡೆಸಿದರು. ಇನ್ನು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ಮೇಲೆ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಗ್ಗೆಯೇ ಸಮಯ ವ್ಯರ್ಥವಾಯಿತು. ಇವರ ಆದ್ಯತೆ ಕಾವೇರಿಗಿಂತ ಕ್ಯಾಬಿನೆಟ್ ಮೇಲೆ ಜಾಸ್ತಿಯಾಗಿದೆ. ತಮಿಳುನಾಡಿನವರು ಆಡಳಿತಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ಎಲ್ಲಾ ರೀತಿಯಲ್ಲೂ ಕಾವೇರಿಯ ಮೇಲೆ ಪಟ್ಟು ಸಾಧಿಸುತ್ತಿದ್ದಾರೆ. ಕರ್ನಾಟಕ ಸರ್ಕಾರ ಮಾತ್ರ ಕಾಂಗ್ರೆಸ್ ಆಡಳಿತದಲ್ಲಿ ನಿದ್ರೆ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ನಮ್ಮ ರೈತರ ಹಿತ ಗಮನದಲ್ಲಿಟ್ಟುಕೊಂಡು ಎಷ್ಟು ನೀರು ಬಿಡಬೇಕು ಎಂಬ ಬಗ್ಗೆ ಪಾರದರ್ಶಕವಾಗಿ ಕೆಲಸ ಮಾಡುತ್ತೇವೆ ಎಂದು ನಮ್ಮ ಸಿಎಂ ಹೇಳಿದ್ದಾರೆ. ಪಾರದರ್ಶಕತೆ ಎಂದರೆ ತಮಿಳುನಾಡಿಗೆ ನೀರು ಬಿಡುವುದೇ? ಮಳೆ ಬಂದಿದೆ, ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ ಎಂದು ನೀರು ಬಿಡುತ್ತ ಹೋದರೆ ಮುಂದಿನ ದಿನಗಳ ಪರಿಸ್ಥಿತಿ ಏನು. ಬೀಸೋ ದೊಣ್ಣೆ ತಪ್ಪಿಸಿಕೊಳ್ಳುವ ವರ್ತನೆ ಬೇಡ ಎಂದು ನಾನು ಸರ್ವಪಕ್ಷ ಸಭೆಯಲ್ಲಿ ಒತ್ತಿ ಒತ್ತಿ ಹೇಳಿದ್ದೇನೆ. ಆದರೆ ಈ ಸರ್ಕಾರ ತನ್ನ ನಿರ್ಲಕ್ಷ ಧೋರಣೆಯಿಂದ ಪದೇ ಪದೇ ತಪ್ಪುಗಳನ್ನೇ ಮಾಡುತ್ತಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಆರಂಭದಿಂದಲೂ ತಮಿಳುನಾಡು ಇದೇ ರೀತಿಯ ವರಸೆಯನ್ನು ತೋರಿಸಿಕೊಂಡು ಬಂದಿದೆ. ನಾವು ನೀರು ಬಿಟ್ಟರು ಕೂಡ ಅವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕುತ್ತಾರೆ. ಅವರೇನು ಮಾಡುತ್ತಾರೆ ಎಂಬ ಬಗ್ಗೆ ಸರ್ಕಾರಕ್ಕೆ ಮುಂದಾಲೋಚನೆ ಇರಬೇಕು. ನೀವು ಎಷ್ಟು ಸ್ಪೀಡು ಇದ್ದೀರಿ ಎಂಬುದನ್ನು ನಾನು ಗಮನಿಸುತ್ತಾ ಬಂದಿದ್ದೇನೆ. ಮುಖ್ಯಮಂತ್ರಿಯಾದ ಮೇಲೆ ತಾವು ನವದೆಹಲಿಗೆ ಎಷ್ಟು ಬಾರಿ ಬಂದಿದ್ದೀರಿ? ರಾಷ್ಟ್ರ ರಾಜಧಾನಿಗೆ ಬಂದಾಗ ಕಾವೇರಿ ವಿಚಾರದಲ್ಲಿ ಯಾರನ್ನಾದರೂ ನಮ್ಮ ವಕೀಲರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು ಉಂಟಾ? ಕಾವೇರಿ ವಿಷಯವನ್ನು ಗಾಳಿಗೆ ಬಿಟ್ಟು ನಿಮ್ಮ ಕ್ಯಾಬಿನೆಟ್ಟು ಖಾತೆ ಹಂಚಿಕೆ ಇತ್ಯಾದಿ ವಿಚಾರಗಳನ್ನು ದೊಡ್ಡದು ಮಾಡಿಕೊಂಡು ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಮತ್ತು ರಂದೀಪ್ ಸಿಂಗ್ ಸುರ್ಜೀವಾಲ ಅವರ ಸುತ್ತ ಗಿರ್ಕಿ ಹೊಡೆಯುತ್ತಿದೆ. ಕರ್ನಾಟಕದ ಜನತೆಗೂ ವೇಣುಗೋಪಾಲ್, ಸುರ್ಜೀವಾಲಗೂ ಏನು ಸಂಬಂಧ ಇದೆ? ನಿಮಗೆ ನಿಮ್ಮ ರಾಜಕೀಯವೇ ದೊಡ್ಡದಾಗಿದೆ, ರಾಜ್ಯದ ಹಿತಾಸಕ್ತಿ ಗೌಣವಾಗಿದೆ ಎಂದು ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಕುಮಾರಸ್ವಾಮಿ ಅವರು ಹರಿಹಾಯ್ದರು.

ಸಾವಿರ ಕೋಟಿ ಯಾರಪ್ಪನ ದುಡ್ಡು?:

ಅನಗತ್ಯವಾದ ವಿಷಯಗಳಿಗೆ ಖರ್ಚು ಮಾಡುತ್ತಿದ್ದೀರಿ. ಯಾರಪ್ಪನ ಮನೆಯ ದುಡ್ಡು ಅಂತಾ ಭಾರತ ಜೋಡೋ ಸಂಘಗಳಿಗೆ ಸಾವಿರ ಕೋಟಿ ಹಣ ಕೊಡುತ್ತಿದ್ದೀರಿ? ಕಾವೇರಿ ಕಣಿವೆ ಪ್ರದೇಶದಲ್ಲಿ ರೈತರು ಬೆಳೆ ಹಾಕಿಲ್ಲ. ಅವರಿಗೆ ಸಕಾಲಕ್ಕೆ ನೆರವಾಗಲು ನಿಮಗೆ ಯೋಗ್ಯತೆ ಇಲ್ಲ. ದೆಹಲಿಗೆ ಬಂದು ವೇಣುಗೋಪಾಲ್ ಮತ್ತು ಸುಜೇವಾಲ ಅವರ ಮನೆಗಳ ಗೇಟ್ ಕಾಯಲು ಬರುತ್ತೀರಿ. ಹಿರಿಯ ವಕೀಲರ ಜತೆ ಚರ್ಚೆ ಮಾಡುವುದಕ್ಕೆ ನಿಮಗೆ ಸಮಯ ಇಲ್ಲ, ನಿಮ್ಮ ಪಾರ್ಟಿ ನಾಯಕರ ಮನೆಗಳನ್ನು ಸುತ್ತುವುದಕ್ಕೆ ಸಮಯವಿದೆ! ಕಾವೇರಿ ಸಂಕಷ್ಟ ಸೂತ್ರ ರೂಪಿಸುವುದಕ್ಕೆ ನಿಮ್ಮ ಪ್ರಯತ್ನ ಏನಿದೆ? ವರ್ಷಕ್ಕೆ ತಮಿಳುನಾಡು ಜನ ಮೂರು ಬೆಳೆ ಬೆಳೆಯುತ್ತಾರೆ. ನಾವು ಒಂದು ಬೆಲೆಯನ್ನೂ ಬೆಳೆಯುತ್ತಿಲ್ಲ. ರಾಜಕೀಯ ಮಾಡುವುದಕ್ಕೆ ಹಾಗೂ ರೈತರ ಭೂಮಿಯನ್ನು ಕೊಳ್ಳೆ ಹೊಡೆಯುವುದಕ್ಕೆ ಸಮಯವಿದೆ, ಕಾವೇರಿ ವಿಷಯಕ್ಕೆ ಮಾತ್ರ ನಿಮಗೆ ಪುರುಸೊತ್ತೇ ಇಲ್ಲ ಎಂದು ಕುಮಾರಸ್ವಾಮಿ ಅವರು ಕಿಡಿ ಕಾರಿದರು.

ಮಳೆ ಬಂದು ಜಲಾಶಯಗಳು ತುಂಬಿದಾಗ ನೀರು ಬಿಡುತ್ತೀರಿ, ಜಲಾಶಯಗಳು ಖಾಲಿಯಾದಾಗ ತಮಿಳುನಾಡು ನೀರು ಕೇಳಿದಾಗ ಎಚ್ಚರಗೊಳ್ಳುತ್ತೀರಿ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದನ್ನು ಬಿಡಿ. ನೆರೆ ರಾಜ್ಯದ ಒತ್ತಡಕ್ಕೆ ಮಣಿಯದಂತೆ ಎಚ್ಚರ ವಹಿಸಿ. ಅಗತ್ಯವಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಿ. ಇಷ್ಟು ದಿನ ಕಾವೇರಿ ವಿಷಯವನ್ನು ಲಘುವಾಗಿ ಪರಿಗಣಿಸಿದ್ದೀರಿ. ಇನ್ನು ಮುಂದಾದರೂ ಇಂತಹ ತಪ್ಪು ಮಾಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಸಚಿವರು ಕಿವಿ ಮಾತು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಸಂಸತ್ ಸದಸ್ಯರಾದ ಎಂ.ಮಲ್ಲೇಶ್ ಬಾಬು, ಶಾಸಕರಾದ ಸಮೃದ್ಧಿ ಮಂಜುನಾಥ್ ಹಾಗೂ ವಿಜಯಪುರ ಜಿಲ್ಲೆಯ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಬಿ.ಡಿ.ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *