“ಕೃಷಿ ಹೊತ್ತಿಗೆ” ಮಾಹಿತಿ ಕೇಂದ್ರ ಉದ್ಘಾಟನೆ

ಚನ್ನರಾಯಪಟ್ಟಣ: ಹಾಸನ ಜಿಲ್ಲೆ: ಹಾಸನ ಕೃಷಿ ಮಹಾವಿದ್ಯಾಲಯದ RAWEP-2026 ಅಂತಿಮ ವರ್ಷದ ವಿದ್ಯಾರ್ಥಿಗಳ ವತಿಯಿಂದ ಚನ್ನರಾಯಪಟ್ಟಣ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ “ಕೃಷಿ ಹೊತ್ತಿಗೆ” ಮಾಹಿತಿ ಕೇಂದ್ರ (IC) ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಸಂದರ್ಭದಲ್ಲಿ ಗಣ್ಯರು ಮಾಹಿತಿ ಕೇಂದ್ರಕ್ಕೆ “ಕೃಷಿ ಹೊತ್ತಿಗೆ” ಎಂಬ ಹೆಸರನ್ನು ನೀಡಿ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಿವಿಧ ವಿಭಾಗಗಳ ಚಾರ್ಟ್‌ಗಳು, ಮಾದರಿಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ಗಣ್ಯರು ಹಾಗೂ ರೈತರಿಗೆ ಪರಿಚಯಿಸಿದರು. ವಿದ್ಯಾರ್ಥಿಗಳು ಕೃಷಿಗೆ ಸಂಬಂಧಿಸಿದ ವೈಜ್ಞಾನಿಕ ಹಾಗೂ ಪ್ರಾಯೋಗಿಕ ಮಾಹಿತಿಯನ್ನು ಸರಳವಾಗಿ ವಿವರಿಸಿದರು.

ಕೀಟಶಾಸ್ತ್ರ ವಿಭಾಗದಲ್ಲಿ ವಿವಿಧ ಬೆಳೆಗಳ ಕೀಟಗಳು, ಅವುಗಳಿಂದ ಉಂಟಾಗುವ ಹಾನಿ ಹಾಗೂ ಸಮಗ್ರ ಕೀಟ ನಿರ್ವಹಣೆ (IPM) ಕುರಿತು ಮಾಹಿತಿ ನೀಡಲಾಯಿತು. ರೇಷ್ಮೆ ಕೃಷಿ ಮತ್ತು ಜೇನು ಸಾಕಾಣಿಕೆ ವಿಭಾಗಗಳಲ್ಲಿ ರೈತರಿಗೆ ಅಗತ್ಯವಾದ ಮಾಹಿತಿಯನ್ನು ಚಾರ್ಟ್‌ಗಳು ಮತ್ತು ಮಾದರಿಗಳ ಮೂಲಕ ವಿವರಿಸಲಾಯಿತು.

ಇದೇ ಸಂದರ್ಭದಲ್ಲಿ ಬರಗೂರು ಗ್ರಾಮದ ರೈತರಿಗೆ ಕೃಷಿ ಔಷಧಿ ಸಿಂಪಡಿಸುವ ಯಂತ್ರದ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ನೀಡಿ, ಯಂತ್ರವನ್ನು ವಿತರಿಸಲಾಯಿತು. ಯಂತ್ರದ ಮೂಲಕ ಬೆಳೆಗಳಿಗೆ ಔಷಧಿಯನ್ನು ಸಮವಾಗಿ ಹಾಗೂ ಪರಿಣಾಮಕಾರಿಯಾಗಿ ಸಿಂಪಡಿಸಲು ಸಾಧ್ಯವಾಗುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರದೇಶವನ್ನು ಒಳಗೊಳ್ಳಬಹುದು. ಅಲ್ಲದೆ, ಸರಿಯಾದ ಪ್ರಮಾಣದಲ್ಲಿ ಔಷಧಿ ಬಳಕೆ, ಔಷಧಿಯ ವ್ಯರ್ಥತೆಯನ್ನು ಕಡಿಮೆ ಮಾಡುವುದು ಹಾಗೂ ರೈತರ ಸಮಯ, ಶ್ರಮ ಮತ್ತು ವೆಚ್ಚವನ್ನು ಉಳಿಸುವಲ್ಲಿ ಇದು ಸಹಕಾರಿಯಾಗಿದೆ. ಪರಿಣಾಮಕಾರಿ ಸಿಂಪಡಣೆಯಿಂದ ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ನಿಯಂತ್ರಣಕ್ಕೆ ನೆರವಾಗಿ ಉತ್ತಮ ಬೆಳೆ ಆರೋಗ್ಯ ಹಾಗೂ ಇಳುವರಿಗೆ ಸಹಾಯಕವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ರೈತರು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಿವಿಧ ಮಾದರಿಗಳು ಮತ್ತು ಚಾರ್ಟ್‌ಗಳನ್ನು ವೀಕ್ಷಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. “ಕೃಷಿ ಹೊತ್ತಿಗೆ” ಮಾಹಿತಿ ಕೇಂದ್ರವು ರೈತರಿಗೆ ಕೃಷಿ ವಿಜ್ಞಾನ, ತಂತ್ರಜ್ಞಾನ ಹಾಗೂ ಪ್ರಾಯೋಗಿಕ ಮಾಹಿತಿಯನ್ನು ಸುಲಭವಾಗಿ ತಲುಪಿಸುವ ಜ್ಞಾನ ವೇದಿಕೆಯಾಗಿ ಮೂಡಿಬಂತು.

ಕಾರ್ಯಕ್ರಮದಲ್ಲಿ ಹಾಸನದ ಜಂಟಿ ಕೃಷಿ ನಿರ್ದೇಶಕರಾದ ಡಾ. ರಮೇಶ್ ಕುಮಾರ್ ಪಿ., ಕೃಷಿ ಮಹಾವಿದ್ಯಾಲಯ, ಕಾರೆಕೆರೆ, ಹಾಸನದ ಡೀನ್ ಡಾ. ಬಿ.ಎಸ್. ಬಸವರಾಜು, RAWEP ಸಂಯೋಜಕರಾದ ಡಾ. ಶಶಿಕಲಾ, ಸಹ ಸಂಯೋಜಕರಾದ ಸಂಧ್ಯಾ ಮೇಡಂ, ಗಣೇಶ್ ಪ್ರಸಾದ್, ಸಹನಾ, ಚಂದನಾ, ಸ್ಮಿತಾ, ಗುರುಮೂರ್ತಿ, ಕೃಷಿ ಅಧಿಕಾರಿಗಳಾದ ಪಲ್ಲವಿ, ಸಹಾಯಕ ಕೃಷಿ ನಿರ್ದೇಶಕರಾದ ಮೋಹನ್ ಕುಮಾರ್ ಹಾಗೂ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ (ATMA) ಶ್ರೀನಿವಾಸ್ ಉಪಸ್ಥಿತರಿದ್ದರು. ಬರಗೂರು1 ಗ್ರಾಮದ ಹೆಚ್ಚಿನ ಸಂಖ್ಯೆಯ ರೈತರು ಹಾಗೂ RAWEP-2026 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *