ತೇಜಸ್ವಿ ವೃತ್ತ ಅಗಲೀಕರಣಕ್ಕೆ ಚಾಲನೆ: ಫುಟ್‌ಪಾತ್ ಒತ್ತುವರಿ ತೆರವು

www.aksharamitra.com

ಸಕಲೇಶಪುರ: ಪಟ್ಟಣದ ತೇಜಸ್ವಿ ವೃತ್ತದ ಸುತ್ತಮುತ್ತಲಿನ ಸುಗಮ ಸಂಚಾರಕ್ಕೆ ಅಡಚಣೆಯಾಗಿದ್ದ ಅಂಗಡಿ ಕಟ್ಟಡಗಳು ಹಾಗೂ ಫುಟ್‌ಪಾತ್ ಒತ್ತುವರಿಗಳನ್ನು ಸಕಲೇಶಪುರ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಸಭೆ ಜಂಟಿಯಾಗಿ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಜೆಸಿಬಿ ಮೂಲಕ ತೆರವುಗೊಳಿಸಿತು. ವೃತ್ತದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ಅಪಘಾತಗಳ ಹಿನ್ನೆಲೆಯಲ್ಲಿ ವೃತ್ತದ ಅಗಲೀಕರಣ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಅದರ ಭಾಗವಾಗಿ ಸರ್ಕಾರಿ ಜಾಗದಲ್ಲಿದ್ದ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಮುಪೀಜ್, ನಗರದ ಸೌಂದರ್ಯೀಕರಣ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರ ಅಭಿವೃದ್ಧಿ ಪ್ರಾಧಿಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ತೇಜಸ್ವಿ ವೃತ್ತದ ಅಭಿವೃದ್ಧಿಯೂ ಅದರಲ್ಲಿ ಒಂದಾಗಿದೆ. ವಾಹನ ಸಂಚಾರ ದಟ್ಟಣೆ ಕಡಿಮೆಗೊಳಿಸಿ ಸಾರ್ವಜನಿಕರಿಗೆ ಸುಗಮ ಸಂಚಾರ ಕಲ್ಪಿಸುವ ಉದ್ದೇಶದಿಂದ ವೃತ್ತವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ತೇಜಸ್ವಿ ವೃತ್ತದಲ್ಲಿ ಹಾಸನ ಹಾಗೂ ಬೇಲೂರಿಗೆ ತೆರಳುವ ಮಾರ್ಗ ಸೂಚಕ ಫಲಕಗಳನ್ನು ಅಳವಡಿಸಿ, ವೃತ್ತವನ್ನು ಸುಂದರವಾಗಿ ನಿರ್ಮಿಸಲಾಗುವುದು. ಸದ್ಯ ಸರ್ಕಾರಿ ಜಾಗದಲ್ಲಿದ್ದ ಒತ್ತುವರಿಗಳನ್ನು ತೆರವುಗೊಳಿಸಲಾಗಿದ್ದು, ಮುಂದಿನ ಹಂತದಲ್ಲಿ ಖಾಸಗಿ ಜಾಗದಲ್ಲಿರುವ ಕಟ್ಟಡಗಳ ತೆರವು ಕಾರ್ಯವೂ ನಿಯಮಾನುಸಾರ ನಡೆಯಲಿದೆ ಎಂದು ತಿಳಿಸಿದರು.

ಜನರು ಕಾರ್ಯಾಚರಣೆಗೆ ಉತ್ತಮ ಸಹಕಾರ ನೀಡುತ್ತಿದ್ದು, ಹಲವರು ಸ್ವಯಂಪ್ರೇರಿತರಾಗಿ ಒತ್ತುವರಿಗಳನ್ನು ತೆರವುಗೊಳಿಸುತ್ತಿರುವುದು ಶ್ಲಾಘನೀಯ. ಪಟ್ಟಣದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಸೈಯದ್ ಮುಪೀಜ್ ಹೇಳಿದರು.

ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ ಮಾತನಾಡಿ, ಸುಮಾರು 20 ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಸಕಲೇಶಪುರ ಪಟ್ಟಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತೇಜಸ್ವಿ ವೃತ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುತ್ತಿರುವುದನ್ನು ಗಮನಿಸಿದ್ದರು. ವೃತ್ತದ ಅಗಲೀಕರಣಕ್ಕೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ವೃತ್ತದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ವೃತ್ತದ ಸುತ್ತಮುತ್ತಲಿನ ಫುಟ್‌ಪಾತ್ ಹಾಗೂ ಅದರ ಮೇಲಿನ ಒತ್ತುವರಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಹೇಳಿದರು.

ಶಾಸಕ ಸಿಮೆಂಟ್ ಮಂಜು ಸ್ಥಳಕ್ಕೆ ಭೇಟಿ

ತೇಜಸ್ವಿ ವೃತ್ತದ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ಸ್ಥಳೀಯ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಸಾರ್ವಜನಿಕರ ಸುಗಮ ಸಂಚಾರ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಕೈಗೊಂಡಿರುವ ಈ ಕಾರ್ಯ ಅಗತ್ಯವಾಗಿದ್ದು, ಇದಕ್ಕೆ ಸಾರ್ವಜನಿಕರು ಉತ್ತಮ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ತೇಜಸ್ವಿ ವೃತ್ತದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವೃತ್ತವನ್ನು ಸುಂದರವಾಗಿ ಹಾಗೂ ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿ, ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

  • ಸಿಮೆಂಟ್ ಮಂಜು, ಶಾಸಕ 

ಕಾರ್ಯಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಾಧಿಕಾರದ ಸದಸ್ಯರಾದ ಬೈಕೆರೆ ದೇವರಾಜ್, ಚರಣ್ ಗೌಡ ಸೇರಿದಂತೆ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *