www.aksharamitra.com

ಸಕಲೇಶಪುರ: ಸಕಲೇಶಪುರ, ಆಲೂರು ಹಾಗೂ ಬೇಲೂರು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ತಕ್ಷಣ ಸೇರ್ಪಡೆಗೊಳಿಸಬೇಕು. ಇಲ್ಲವಾದಲ್ಲಿ ಮೂರು ತಾಲೂಕುಗಳ ಬೆಳೆಗಾರರನ್ನು ಒಗ್ಗೂಡಿಸಿ ಹೋರಾಟ ನಡೆಸಲಾಗುವುದು ಎಂದು ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಎಂಟು ತಾಲೂಕುಗಳ ಪೈಕಿ ಐದು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಕಾಫಿ ಬೆಳೆಯುವ ಪ್ರಮುಖ ಪ್ರದೇಶಗಳಾದ ಸಕಲೇಶಪುರ, ಆಲೂರು ಹಾಗೂ ಬೇಲೂರು ತಾಲೂಕುಗಳನ್ನು ಕೈಬಿಟ್ಟಿರುವುದು ಖಂಡನೀಯ ಎಂದರು.

ಫೆಬ್ರವರಿ, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ತೀವ್ರ ಬಿಸಿಲಿನಿಂದ ಉಷ್ಣಾಂಶ ಹೆಚ್ಚಾಗಿತ್ತು. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತ ಸುಮಾರು ಶೇ.50ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ಕಾಫಿ, ಕಾಳುಮೆಣಸು ಹಾಗೂ ಅಡಿಕೆ ಬೆಳೆಗಳಿಗೆ ತೀವ್ರ ಹಾನಿಯಾಗಿದ್ದು, ಸುಮಾರು ಶೇ.50ರಷ್ಟು ನಷ್ಟ ಉಂಟಾಗಿದೆ. ಭತ್ತದ ನಾಟಿಯ ಮೇಲೂ ಪರಿಣಾಮ ಬೀರಿದ್ದು, ಸುಮಾರು ಶೇ.90ರಷ್ಟು ಪ್ರದೇಶದಲ್ಲಿ ನಾಟಿ ಸಾಧ್ಯವಾಗಿಲ್ಲ ಎಂದು ಹೇಳಿದರು.

ಮೂರು ತಾಲೂಕಿನ ಪರಿಸ್ಥಿತಿಯನ್ನು ಪರಿಗಣಿಸಿ ಸಕಲೇಶಪುರ, ಆಲೂರು ಹಾಗೂ ಬೇಲೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು. ಈ ಕುರಿತು ಸರ್ಕಾರಕ್ಕೆ 15 ದಿನಗಳ ಕಾಲಾವಕಾಶ ನೀಡುತ್ತಿದ್ದು, ಅವಧಿಯೊಳಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಮೂರು ತಾಲೂಕುಗಳ ಬೆಳೆಗಾರರೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

  • ಮಂಜುನಾಥ್ ಶೆಟ್ಟಿ, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ

ಸಂಘದ ಕಾರ್ಯದರ್ಶಿ ಹೆಗ್ಗಾವೆ ಪುಟ್ಟರಾಜು ಮಾತನಾಡಿ, ಕಾಫಿ ಬೆಳೆಯುವ ಪ್ರಮುಖ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ಬೇಸರದ ಸಂಗತಿ. ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ಪ್ರಸ್ತಾವನೆ ಇರುವ ಹಿನ್ನೆಲೆಯಲ್ಲಿ ಸಕಲೇಶಪುರ, ಆಲೂರು ಹಾಗೂ ಬೇಲೂರು ತಾಲೂಕುಗಳನ್ನೂ ಸೇರ್ಪಡೆಗೊಳಿಸಬೇಕು. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಂಸದರು ಸರ್ಕಾರದ ಗಮನಕ್ಕೆ ತಂದು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಖಜಾಂಚಿ ಲೋಕೇಶ್ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆ ಪ್ರಮಾಣದಲ್ಲಿ ಸುಮಾರು ಶೇ.50ರಷ್ಟು ಕೊರತೆಯಾಗಿದೆ. ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಕಾಫಿ ಹಾಗೂ ಕಾಳುಮೆಣಸು ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಕೊಳೆರೋಗವೂ ಕಾಣಿಸಿಕೊಂಡಿದೆ. ಬೆಳೆಗಾರರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸಚಿನ್, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *