Share this... Whatsapp Facebook Pinterest Twitter Linkedin Gmail Printಕನಿಷ್ಠ ವೇತನ ಜಾರಿಗಾಗಿ ಗೆ ಸೆ. 8ರಂದು ಬೆಂಗಳೂರು ಚಲೋ – ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಎಚ್ಚರಿಕೆ ಹಾಸನ: ರಾಜ್ಯ ಸರ್ಕಾರವು ಕಾರ್ಮಿಕರಿಗೆ ನಿಗದಿಪಡಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ತಕ್ಷಣವೇ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಎಚ್ಚರಿಸಿದ್ದಾರೆ. ನಗರದಲ್ಲಿ ಸಿಐಟಿಯು, ಕೆಪಿಆರ್ಎಸ್ ಹಾಗೂ ಡಿಎಚ್ಎಸ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೃಹತ್ ಜನಾಕ್ರೋಶ ಸಭೆಯನ್ನು ಉದ್ದೇಶಿಸಿ ಅವರು ದಿಕ್ಸೂಚಿ ಭಾಷಣ ಮಾಡುವ ಮೂಲಕ ಮಾತನಾಡಿದರು. ಕಾರ್ಪೊರೇಟ್ ಒತ್ತಡಕ್ಕೆ ಮಣಿದ ಸರ್ಕಾರ: ದೇಶದಲ್ಲಿ ಕಳೆದ 10-15 ವರ್ಷಗಳಿಂದ ಬಂಡವಾಳ ಶಾಹಿ ಹಾಗೂ ಕಾರ್ಪೊರೇಟ್ ಕಂಪನಿಗಳ ಸಂಪತ್ತು ನೂರಾರು ಪಟ್ಟು ಹೆಚ್ಚಾಗಿದ್ದರೆ, ಶ್ರಮಿಕ ವರ್ಗದ ಆದಾಯ ಸಂಪೂರ್ಣ ಕುಸಿದು ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ದುಸ್ತರವಾಗಿದೆ. ಕಾರ್ಮಿಕ ಸಂಘಟನೆಗಳ ಸುದೀರ್ಘ ಹೋರಾಟದ ಫಲವಾಗಿ ಮೇ 22ರಂದು ಸರ್ಕಾರ ಕನಿಷ್ಠ ವೇತನದ ಅಧಿಸೂಚನೆ ಹೊರಡಿಸಿದ್ದರೂ, ಖಾಸಗಿ ಮಾಲಿಕರ ಒತ್ತಡಕ್ಕೆ ಮಣಿದು ಅದನ್ನು ಮೌಖಿಕವಾಗಿ ತಡೆಹಿಡಿಯಲಾಗಿದೆ. ಗ್ರಾಮ ಪಂಚಾಯತ್, ಆಶಾ, ಅಂಗನವಾಡಿ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಹಲವು ತಿಂಗಳುಗಳಿಂದ ವೇತನ ಬಿಡುಗಡೆ ಮಾಡದೆ ಆಡಳಿತ ಯಂತ್ರ ನಿರ್ಲಕ್ಷ್ಯ ವಹಿಸಿದೆ ಎಂದರು. ಚಳುವಳಿಯ ಮುಂದಿನ ಹಂತಗಳು: ಕಾರ್ಮಿಕ ಇಲಾಖೆಗೆ ಅರ್ಜಿ ಸಲ್ಲಿಕೆ: ಕನಿಷ್ಠ ವೇತನ ಕಸಿದುಕೊಳ್ಳುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯದ ಪ್ರತಿಯೊಬ್ಬ ಕಾರ್ಮಿಕರೂ ಇಲಾಖೆಗೆ ಸಾಮೂಹಿಕವಾಗಿ ಕ್ಲೈಮ್ ಅರ್ಜಿ’ (Claim Form) ಸಲ್ಲಿಸುವುದು. ಆಗಸ್ಟ್ 18 – ಜಿಲ್ಲಾ ಪಂಚಾಯತ್ ಮುತ್ತಿಗೆ: ಗ್ರಾಮ ಪಂಚಾಯತ್ ನೌಕರರ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡಲು ಒತ್ತಾಯಿಸಿ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲಾ ಜಿಲ್ಲಾ ಪಂಚಾಯತ್ಗಳಿಗೆ ಬೃಹತ್ ಮುತ್ತಿಗೆ ಹಾಕುವುದು. ಸೆಪ್ಟೆಂಬರ್ 8ರಂದು ‘ಬೆಂಗಳೂರು ಚಲೋ’: ಸರ್ಕಾರದ ವಿಳಂಬ ನೀತಿ ಖಂಡಿಸಿ ರಾಜ್ಯದ ಲಕ್ಷಾಂತರ ಕಾರ್ಮಿಕರು ಬೆಂಗಳೂರಿಗೆ ಆಗಮಿಸಿ ಅಹೋರಾತ್ರಿ ಧರಣಿ ಹಾಗೂ ರಸ್ತೆ ತಡೆ ಚಳುವಳಿ ನಡೆಸುವುದು. ಸರ್ಕಾರದ ಸುಳ್ಳು ಲೆಕ್ಕಾಚಾರಕ್ಕೆ ವಾಗ್ದಂಡನೆ: ದೇಶದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಜಿಡಿಪಿ ಹೆಚ್ಚಳದ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ಅಂಕಿ-ಅಂಶಗಳು ಸುಳ್ಳಿನಿಂದ ಕೂಡಿವೆ ಎಂದು ವಿಶ್ವ ಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳು ವರದಿ ಮಾಡಿವೆ. ಉದ್ಯೋಗ ನಷ್ಟದಿಂದ ಸಾಫ್ಟ್ವೇರ್ ನೌಕರರು ಕೂಡ ರಸ್ತೆ ಬದಿ ವ್ಯಾಪಾರ ಮಾಡುವ ದುಸ್ಥಿತಿ ಬಂದಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅನುದಾನ ನೀಡದ ಸರ್ಕಾರಗಳು, ಜಿಎಸ್ಟಿ ಹೆಸರಿನಲ್ಲಿ ಶ್ರಮಿಕರ ಜೇಬಿಗೆ ಕನ್ನ ಹಾಕುತ್ತಿವೆ ಧರ್ಮೇಶ್, ಜಿಲ್ಲಾಧ್ಯಕ್ಷ, ಸಿಐಟಿಯು ಸಭೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ಖಜಾಂಚಿ ಅರವಿಂದ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಹೆಚ್.ಎಸ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ನವೀನ್ ಕುಮಾರ್, ಡಿಹೆಚ್ಎಸ್ ನ ಜಿಲ್ಲಾ ಸಂಚಾಲಕರಾದ ಎಂ.ಜಿ.ಪೃಥ್ವಿ, ಮುಖಂಡರುಗಳಾದ ಹೊನ್ನೇಗೌಡ, ಚಂದ್ರೇಗೌಡ, ನಂದೀಶ್, ಕುಮಾರಸ್ವಾಮಿ, ಚಂದ್ರಹಾಸ್, ಬಿಟಿಯೂಟ ನೌಕರರ ಸಂಘಟನೆಯ ಉಷಾ ಸೇರಿದಂತೆ ಈ ಜನಾಕ್ರೋಶ ಸಭೆಯಲ್ಲಿ ರೈತ ಮತ್ತು ಕಾರ್ಮಿಕ ಸಂಘಟನೆಗಳ ತಾಲೂಕು ಹಾಗೂ ಜಿಲ್ಲಾ ಮಟ್ಟದ ನಾಯಕರು ಮತ್ತು ನೂರಾರು ಶ್ರಮಿಕರು ಭಾಗವಹಿಸಿದ್ದರು. Share this... Whatsapp Facebook Pinterest Twitter Linkedin Gmail Print Post navigation ಮೈತ್ರಿ ಪಾದಯಾತ್ರೆ ತಡೆಗೆ ಮಾಜಿ ಪ್ರಧಾನಿ ಕಿಡಿ ಹಾಸನ -ಮುಂಬೈ ಗೆ ಹೊಸ ರೈಲು