Share this... Whatsapp Facebook Pinterest Twitter Linkedin Gmail Printಹಾಸನ: ಮಲ್ನಾಡ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ದೇಶಭಕ್ತಿ ಹಾಗೂ ಹೆಮ್ಮೆಯ ಭಾವನೆಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ನಿವೃತ್ತ ಸೇನಾಧಿಕಾರಿ ನಾಯಬ್ ಸುಬೇದಾರ್ ಈಶ್ವರ ಗೌಡ ಮಾತನಾಡಿದರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಿವೃತ್ತ ಸೇನಾಧಿಕಾರಿ ನಾಯಬ್ ಸುಬೇದಾರ್ ಈಶ್ವರ ಗೌಡ ಅವರು ಭಾಗವಹಿಸಿದ್ದರು. ದೇಶದ ಗಡಿಗಳನ್ನು ರಕ್ಷಿಸುವಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಅಮೂಲ್ಯ ಪಾತ್ರವನ್ನು ಅವರು ವಿವರಿಸಿದರು. ಕಾರ್ಗಿಲ್ ಯುದ್ಧದ ಸಂದರ್ಭದ ತಮ್ಮ ಅನುಭವಗಳನ್ನು ಮೆಲುಕು ಹಾಕಿದ ಅವರು, ಹಗಲು-ರಾತ್ರಿ ಎನ್ನದೆ ದೇಶದ ಸೇವೆಯಲ್ಲಿ ತೊಡಗಿರುವ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಪ್ರದೀಪ್, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ತ್ಯಾಗ, ಬಲಿದಾನ ಮಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದರು. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು, ವೈವಿಧ್ಯತೆಯನ್ನು ಗೌರವಿಸುವುದು, ಪರಿಸರವನ್ನು ಸಂರಕ್ಷಿಸುವುದು ಹಾಗೂ ತಾಂತ್ರಿಕ ಜ್ಞಾನವನ್ನು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಬೆಸೆಯುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಮಲ್ನಾಡ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಟಿ. ಕುಮಾರ್ ಅವರು, ಸ್ವಾತಂತ್ರ್ಯಾ ನಂತರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಗಮನಾರ್ಹ ಪ್ರಗತಿಯನ್ನು ವಿವರಿಸಿದರು. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಂಸಿಇ ಹಳೆಯ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ಯಶಸ್ವಿನಿ ಡಿ.ಎಸ್. ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಮಾತನಾಡಿದರು. ಪ್ರಾಮಾಣಿಕತೆ, ಸಮರ್ಪಣಾ ಮನೋಭಾವ ಹಾಗೂ ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ದೇಶದ ಅಭಿವೃದ್ಧಿಗೆ ಅರ್ಥಪೂರ್ಣ ಕೊಡುಗೆ ನೀಡಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಲ್ನಾಡ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಖಜಾಂಚಿ ಎಸ್.ಜಿ. ಶ್ರೀಧರ್, ನಿರ್ದೇಶಕರಾದ ಜಿ.ಆರ್. ಶ್ರೀನಿವಾಸ್, ಜಿ.ಕೆ. ಶಂಕರ್, ಬಿ.ಎನ್. ಸುರೇಶ್, ಬಿ.ಆರ್. ರಾಜಶೇಖರ್ ಹಾಗೂ ನಾಗರಾಜ್ ಜೈನ್, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಸೋಮಶೇಖರ್, ಸಿಬ್ಬಂದಿ ಕ್ಲಬ್ ಕಾರ್ಯದರ್ಶಿ ಡಾ. ಕೀರ್ತಿ ಡಿ.ಎಸ್., ನೌಕರರ ಕಲ್ಯಾಣ ಸಂಘದ ಕಾರ್ಯದರ್ಶಿ ಪಾಂಡುಕುಮಾರ್ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. Share this... Whatsapp Facebook Pinterest Twitter Linkedin Gmail Print Post navigation ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ- ಶಾಸಕ ತಮಿಳುನಾಡಿಗೆ ನೀರು ಕೊಟ್ಟು ಜಿಲ್ಲೆಯ ರೈತರಿಗೆ ಸರ್ಕಾರದಿಮದ ಅನ್ಯಾಯ –ನಾರಾಯಣಗೌಡ