ಡಾ. ಎಂ.ಪಿ. ಪರಮೇಶ್ವರನ್ ನಿಧನಕ್ಕೆ ಹಾಸನ ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಂತಾಪ

ಹಾಸನ: ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತಿನ ಪ್ರಮುಖ ರೂವಾರಿಗಳಲ್ಲಿ ಒಬ್ಬರಾದ ಖ್ಯಾತ ಪರಮಾಣು ವಿಜ್ಞಾನಿ, ಶಿಕ್ಷಣತಜ್ಞ ಮತ್ತು ಜನವಿಜ್ಞಾನ ಚಳವಳಿಯ ಮುಂಚೂಣಿ ನಾಯಕ ಡಾ. ಎಂ.ಪಿ. ಪರಮೇಶ್ವರನ್ ಅವರ ನಿಧನಕ್ಕೆ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ವಿಜ್ಞಾನವನ್ನು ಪ್ರಯೋಗಾಲಯಗಳಲ್ಲೇ ಸೀಮಿತಗೊಳಿಸದೆ ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯಬೇಕು ಎಂಬ ಮಹತ್ವದ ಆಶಯದೊಂದಿಗೆ ತಮ್ಮ ಬದುಕನ್ನು ಜನವಿಜ್ಞಾನ ಚಳವಳಿಗೆ ಸಮರ್ಪಿಸಿಕೊಂಡಿದ್ದ ಡಾ. ಪರಮೇಶ್ವರನ್ ಅವರು ದೇಶದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಸಮಿತಿ ಸ್ಮರಿಸಿದೆ.

ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ ಅವರು, ನಂತರ ಜನಸಾಮಾನ್ಯರ ನಡುವೆ ವಿಜ್ಞಾನ ಮತ್ತು ವೈಜ್ಞಾನಿಕ ಚಿಂತನೆ ಬೆಳೆಸುವ ಉದ್ದೇಶದಿಂದ ತಮ್ಮ ವೃತ್ತಿಜೀವನವನ್ನು ತ್ಯಜಿಸಿ ಜನಪರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತನ್ನು (KSSP) ಜನಪ್ರಿಯ ವಿಜ್ಞಾನ ಚಳವಳಿಯಾಗಿ ಬೆಳೆಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು.

1987ರ ಭಾರತ ಜನ ಜ್ಞಾನ ವಿಜ್ಞಾನ ಜಾಥಾದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು, ದೇಶಾದ್ಯಂತ ವಿಜ್ಞಾನ ಜಾಗೃತಿ ಮತ್ತು ಸಾಕ್ಷರತಾ ಚಳವಳಿಗೆ ಹೊಸ ಆಯಾಮ ನೀಡಿದರು. ಇದರ ಮುಂದುವರಿದ ಭಾಗವಾಗಿ ರೂಪುಗೊಂಡ ಭಾರತ ಜ್ಞಾನ ವಿಜ್ಞಾನ ಸಮಿತಿ (BGVS) ಹಾಗೂ ಅಖಿಲ ಭಾರತ ಜನವಿಜ್ಞಾನ ಜಾಲದ ಬೆಳವಣಿಗೆಗೆ ಅವರ ಕೊಡುಗೆ ಸ್ಮರಣೀಯವಾಗಿದೆ.

ವಿಜ್ಞಾನ, ಪರಿಸರ, ಖಗೋಳಶಾಸ್ತ್ರ ಹಾಗೂ ಸಾಮಾಜಿಕ ವಿಚಾರಗಳ ಕುರಿತು ಸರಳ ಭಾಷೆಯಲ್ಲಿ ಬರೆಯುವ ಮೂಲಕ ಅವರು ಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿದರು. ಹೊಸ ಪೀಳಿಗೆಯಲ್ಲಿ ಪ್ರಶ್ನಿಸುವ ಮನೋಭಾವ, ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನ ಬೆಳೆಸುವುದು ಅವರ ಜೀವನದ ಪ್ರಮುಖ ಆಶಯವಾಗಿತ್ತು.

ಡಾ. ಪರಮೇಶ್ವರನ್ ಅವರಂತಹ ಮಹಾನ್ ವಿಜ್ಞಾನಿ ಮತ್ತು ಜನವಿಜ್ಞಾನ ಚಳವಳಿಯ ಮಾರ್ಗದರ್ಶಕರ ಅಗಲಿಕೆ ದೇಶದ ಜನವಿಜ್ಞಾನ ಚಳವಳಿಗೆ ತುಂಬಲಾರದ ನಷ್ಟ. ಅವರ ವಿಚಾರಗಳು ಮತ್ತು ಜನಪರ ವಿಜ್ಞಾನದ ಆಶಯಗಳು ಮುಂದಿನ ಪೀಳಿಗೆಗೆ ಸದಾ ದಾರಿದೀಪವಾಗಲಿವೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲಾ ಸಮಿತಿ ತನ್ನ ಶ್ರದ್ಧಾಂಜಲಿ ಹೇಳಿಕೆಯಲ್ಲಿ ತಿಳಿಸಿದೆ.

ಡಾ.ಎಂ.ಪಿ.ಪರಮೇಶ್ವರನ್ ಅಗಲಿಕೆಯಿಂದ ದುಃಖತಪ್ತರಾಗಿರುವ ಕುಟುಂಬ,ಸಹೋದ್ಯೋಗಿಗಳು, ಹಿತೈಷಿಗಳು ಹಾಗೂ ದೇಶದಾದ್ಯಂತದ ಜನವಿಜ್ಞಾನ ಕಾರ್ಯಕರ್ತರಿಗೆ ಜಿಲ್ಲಾ ಸಮಿತಿ ತನ್ನ ಆಳವಾದ ಸಂತಾಪವನ್ನು ಇಂದು ಹಾಸನದ ಬಿಜಿವಿಎಸ್ ಕಚೇರಿಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ, ರಾಜ್ಯ ಸಮಿತಿ ಸಹಕಾರ್ಯದರ್ಶಿ ಅಹಮದ್ ಹಗರೆ, ರಾಜ್ಯ ಸಮಿತಿ ಸದಸ್ಯ ಎಚ್.ಟಿ.ಗುರುರಾಜು, ಜಿಲ್ಲಾ ಉಪಾಧ್ಯಕ್ಷ ಧರ್ಮರಾಜ್, ಶಿಕ್ಷಣ‌ ಚಿಂತಕಿ ಲಾವಣ್ಯ, ಸಿಐಟಿಯು ಅಧ್ಯಕ್ಷ ಧರ್ಮೇಶ್, ಸಾಮಾಜಿಕ ಕಾರ್ಯಕರ್ತ ಪ್ರಕಾಶ್, ಕಾರ್ಮಿಕ ಮುಖಂಡ ಅರವಿಂದ ಮುಂತಾದವರಿದ್ದರು.

 

Leave a Reply

Your email address will not be published. Required fields are marked *