ಹಿಮ್ಸ್ ಡಿ-ಗ್ರೂಪ್ ನೌಕರರ ನಿಯೋಜನೆ ಅಕ್ರಮ: ಸಮಗ್ರ ತನಿಖೆಗೆ ರವೀಶ್ ಬಸವಾಪುರ ಆಗ್ರಹ

ಹಾಸನ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (HIMS) ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಡಿ-ಗ್ರೂಪ್ ನೌಕರರ ಹಾಜರಾತಿ ಮತ್ತು ಕಾರ್ಯನಿರ್ವಹಣೆಯಲ್ಲಿ ನಡೆದಿರುವ ಲೋಪವನ್ನು ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಹಿಮ್ಸ್ ಆಡಳಿತ ಪರಿಷತ್ ಸದಸ್ಯ ರವೀಶ್ ಬಸವಾಪುರ ಆಗ್ರಹಿಸಿದ್ದಾರೆ.

ಕೆ.ಆರ್.‌ಎಸ್ ಪಕ್ಷದ ಕಾರ್ಯಕರ್ತರು ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಈ ಅಕ್ರಮ ಬಯಲಿಗೆ ಬಂದಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಡಿ-ಗ್ರೂಪ್ ನೌಕರರ ಹಾಜರಾತಿ ದಾಖಲಿಸಿ, ಅವರನ್ನು ಖಾಸಗಿ ಆಸ್ಪತ್ರೆಗಳ ಕೆಲಸಕ್ಕೆ ಹಾಗೂ ಶೌಚಾಲಯ ಸ್ವಚ್ಛತೆ ಸೇರಿದಂತೆ ವಿವಿಧ ಕೆಲಸಗಳಿಗೆ ಹಾಗೂ ಸಂಸ್ಥೆ ಬಿಟ್ಟು ಬೇರೆಡೆ ಕಾರ್ಯನಿರ್ವಹಿಸಲು ಬಳಸಿಕೊಂಡಿರುವುದು ಅಲ್ಲದೆ, ಹಿಮ್ಸ್‌ನಲ್ಲಿ ಹಾಜರಾತಿ ನೀಡಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿಸುವ ಮೂಲಕ ಅಕ್ರಮವಾಗಿ ಹಿಮ್ಸ್ ಸಂಸ್ಥೆಯಿಂದ ಸಂಬಳ ಪಡೆದಿರುವುದು ಮೇಲ್ನೋಟಕ್ಕೆ ಸತ್ಯ ಎಂಬಂತೆ ಕಂಡುಬಂದಿದ್ದು, ಸಾರ್ವಜನಿಕರ ಸೇವೆ ಮಾಡಬೇಕಾದ ಹಿಮ್ಸ್ ಸಂಸ್ಥೆಯಲ್ಲಿ ಈ ರೀತಿಯ ಹಗಲು ದರೋಡೆ ನಡೆದಿರುವುದಕ್ಕೆ ಸಂಸ್ಥೆಯ ಅಧಿಕಾರಿಗಳು ಭಾಗಿಯಾಗಿರುವಂತೆ ಕಂಡು ಬರುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆಯಿಂದ ಸೂಕ್ತ ತನಿಕೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಾಥಮಿಕ ಹಂತದಲ್ಲಿ ಲೋಪವಾಗಿರುವುದು ಕಂಡುಬಂದಿದ್ದು ತಪ್ಪಿತಸ್ಥರ ವಿರುದ್ದ ತಕ್ಷಣವೇ ಕ್ರಮ ಜರುಗಿಸುವುದರ ಜೊತೆಗೆ, ನೌಕರರನ್ನು ಪೂರೈಸಿದ ಹೊರಗುತ್ತಿಗೆ ಏಜೆನ್ಸಿಗೆ ನೋಟೀಸ್ ನೀಡಿ ತಾನೂನು ಕ್ರಮ ಕೈಗೊಳ್ಳಬೇಕು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ ಪಾಟೀಲ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *