ಆರ್. ಪಿ. ವೆಂಕಟೇಶಮೂರ್ತಿ, ಪತ್ರಕರ್ತ

1970ರ ದಶಕದಲ್ಲಿ ಭಾರತದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, ದೇಶದಲ್ಲಿ ಕಾಂಗ್ರೆಸ್ ಗೆ ಪ್ರತಿಪಕ್ಷಗಳಾಗಿದ್ದ ಭಾರತೀಯ ಲೋಕದಳ, ಜನ ಸಂಘ, ಸ್ವತಂತ್ರ ಪಕ್ಷ,ಹಾಗೂ ಸಮಾಜವಾದಿ ಪಕ್ಷಗಳು, ವಿಲೀನಗೊಂಡು ಜನತಾ ಪಕ್ಷ ರಚನೆಯಾಗಿ 1977ರ ಐತಿಹಾಸಿಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೊದಲ ಬಾರಿಗೆ ಅಧಿಕಾರ ಕಳೆದುಕೊಂಡ ವಿಷಯ, ರಾಜಕಾರಣದ ಬಗ್ಗೆ ಸ್ವಲ್ಪ ಆಸಕ್ತಿ ಇರುವವರಿಗೂ ಗೊತ್ತಿರುವ ವಿಷಯ. ಜನತಾ ಪಕ್ಷದಲ್ಲಿ ಸೇರ್ಪಡೆ ಆಗದ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ, ಕಿಶನ್ ಪಾಟ್ನಾಯಕ್, ಕೇಶವರಾವ್ ಜಾದವ್, ಸತ್ಯನಾರಾಯಣ ಸಿನ್ಹಾ, ಮುಂತಾದ ದೇಶದ ಹಲವು ಸಮಾಜವಾದಿಗಳು ಸೇರಿ 1980ರ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಸಮತಾ ಸಮಾವೇಶ ನಡೆಸುತ್ತಾರೆ. ಈ ಸಮಾವೇಶದಲ್ಲಿ ಪ್ರೊಫೆಸರ್ ರವಿವರ್ಮಾ ಕುಮಾರ್, ಡಿ.ಎಸ್. ನಾಗಭೂಷಣ,ಮುಂತಾದವರೂ ಭಾಗವಹಿಸುತ್ತಾರೆ. ಈ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳಲ್ಲಿ ಸಮಾಜವಾದಿಗಳು ದೇಶದಲ್ಲಿ ಸಂಕಷ್ಟದಲ್ಲಿರುವ ರೈತರನ್ನು ಸಂಘಟಿಸಿ ಹೋರಾಟ ನಡೆಸಬೇಕೆಂದು ಕೂಡ ಸೇರಿರುತ್ತದೆ.

ಈ ಸಮಾವೇಶದಲ್ಲಿ ಭಾಗವಹಿಸಿದ್ದ ಹಾಸನ ಜಿಲ್ಲೆ ಮಂಜುನಾಥ ದತ್ತ,  ಆರ್.ಪಿ. ವೆಂಕಟೇಶ ಮೂರ್ತಿ, ಸಾಲಗಾಮೆ ನಂಜುಂಡೇಗೌಡ, ಕೆ.ಟಿ.ಶಿವಪ್ರಸಾದ್, ಪೀಟರ್ ಫಿಲಿಪ್, ಮುಂತಾದವರು ಹಾಸನಕ್ಕೆ ವಾಪಸಾದ ನಂತರ ರೈತ ಸಂಘಟನೆಯ ಆರಂಭಕ್ಕೆ ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಮತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಉತ್ತರ ಭಾರತದ ಕೆಲವು ಸಮಾಜವಾದಿ ಯುವಕರು ಕೂಡ ಹಾಸನದ ಗೆಳೆಯರೊಂದಿಗೆ ಸೇರಿ ಸಾಲಗಾಮೆ ಹೋಬಳಿಯ ಹಳ್ಳಿಗಳಲ್ಲಿ ಸಂಚರಿಸುತ್ತಾರೆ.

ಜೂನ್ 22ರಂದು ಸಾಲಗಾಮೆಯಲ್ಲಿ ರೈತರ ಮೊದಲ ಸಭೆ ನಡೆಯುತ್ತದೆ. ಮರುದಿನ ಜೂನ್ 23ರಂದು ಸಾಲಗಾಮೆಯಿಂದ ಹಾಸನದ ತನಕ “ಸಮಾಜವಾದಿ ರೈತ ಸಭಾ ” ಬ್ಯಾನರ್ ಅಡಿಯಲ್ಲಿ ರೈತರು ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಯ ಬಾಗಿಲಿಗೆ ರೈತರ ಬೇಡಿಕೆಯ ಪಟ್ಟಿಯೊಂದನ್ನು ಅಂಟಿಸುತ್ತಾರೆ. 1983ರ ಜೂನ್ 23ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ ಗಾಂಧಿ ಹೆಲಿಕಾಪ್ಟರ್ ಒಂದರ ಅಪಘಾತದಲ್ಲಿ ನಿಧನವಾದ ದಿನ.  ಹೀಗೆ ಖ್ಯಾತ ಕಲಾವಿದ ಕೆ.ಟಿ. ಶಿವಪ್ರಸಾದ್ ಅವರು ರೈತ ಸಂಘಟನೆ ಆರಂಭದಲ್ಲಿ ತಮ್ಮ ಹೆಜ್ಜೆ ಮೂಡಿಸುತ್ತಾರೆ.

ಇದೇ ಕಾಲಘಟ್ಟದಲ್ಲಿ ಧಾರವಾಡ ಜಿಲ್ಲೆಯ ರೈತರು ನೀರಾವರಿ ಜಮೀನಿಗೆ ಸರ್ಕಾರ ವಿಧಿಸಿದ್ದ ಬೆಟರ್ ಮೆಂಟ್ ಲೆವಿ ವಿರುದ್ಧ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ ನಿಂದ ನರಗುಂದ ಹಾಗೂ ನವಲಗುಂದದಲ್ಲಿ ರೈತರು ಸಾವನ್ನಪ್ಪುತ್ತಾರೆ. ಮುಂದೆ ನರಗುಂದ ರೈತ ಬಂಡಾಯವೆಂದು ಖ್ಯಾತಿ ಪಡೆದ ಈ ಪ್ರಕರಣವು ಇಡೀ ನಾಡಿನ ರೈತರಲ್ಲಿ ಹೋರಾಟದ ಕಿಡಿ ಹೊತ್ತಿಸುತ್ತದೆ.  ಅಲ್ಲಿಂದ ಮುಂದೆ ರಾಜ್ಯದ ಹಲವು ರೈತರ ಹೋರಾಟ ಆರಂಭವಾಗುತ್ತದೆ.

ಶಿವಮೊಗ್ಗ ಜಿಲ್ಲೆಯ ರೈತರು 1980 ರ ಆಗಸ್ಟ್ ನಲ್ಲಿ ನಡೆಸಿದ ರಸ್ತೆ ತಡೆ ಚಳುವಳಿಯು ಹಲವು ದಿನಗಳ ಕಾಲ ನಡೆದು, ಇಡೀ ರಾಜ್ಯದ ಗಮನ ಸೆಳೆಯುತ್ತದೆ. ಈ ಚಳುವಳಿಯನ್ನು ಮುನ್ನಡೆಸಿದ ಹೆಚ್.ಎಸ್.ರುದ್ರಪ್ಪ, ಏನ್.ಡಿ. ಸುಂದರೇಶ್, ಕಡಿದಾಳು ಶಾಮಣ್ಣ, ಕೆ.ಟಿ. ಗಂಗಾಧರ್, ಮುಂತಾದವರು ಬೆಳಕಿಗೆ ಬರುತ್ತಾರೆ.

ಅದೇ ವರ್ಷ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ಶಿವಮೊಗ್ಗದಲ್ಲಿ ರೈತರ ಬೃಹತ್ ಸಮಾವೇಶ ನಡೆಯುತ್ತದೆ, ಈ ಸಮಾವೇಶದಲ್ಲಿ ಪ್ರೊಫೆಸರ್ ಎಂ. ಡಿ. ನಂಜುಂಡಸ್ವಾಮಿ, ಪಿ.ಲಂಕೇಶ್ ಮುಂತಾದವರೂ ಪಾಲ್ಗೊಳ್ಳುತ್ತಾರೆ. ವಿಶೇಷವೆಂದರೆ ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರಿಗೆ ರೈತ ಚಳುವಳಿಯು ರಾಜಕೀಯ ರಹಿತವಾಗಿ ನಡೆಯಬೇಕೆಂದು ಕಾರಣ ನೀಡಿ ಸ್ಥಳೀಯ ಸಂಘಟಕರು ವೇದಿಕೆಯನ್ನು ನಿರಾಕರಿಸುತ್ತಾರೆ. ಹೀಗೆ ಹಾಸನ, ಧಾರವಾಡ, ಶಿವಮೊಗ್ಗ, ಮುಂತಾಗಿ ಹಲವು ಜಿಲ್ಲೆಗಳಲ್ಲಿ ರೈತರ ಹೋರಾಟವನ್ನು ಸಂಘಟಿಸಿದ್ದವರು ಅಕ್ಟೋಬರ್ 17ರಂದು ಹುಬ್ಬಳ್ಳಿಯಲ್ಲಿ ಸಭೆ ಸೇರಿ ಕರ್ನಾಟಕ ರಾಜ್ಯ ರೈತ ಸಂಘವನ್ನು ಅಸ್ತಿತ್ವಕ್ಕೆ ತರುತ್ತಾರೆ.

ಹೆಚ್.ಎಸ್. ರುದ್ರಪ್ಪ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಎಂ.ಡಿ. ಸುಂದರೇಶ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿಯವರನ್ನು ಹೋರಾಟ ಸಮಿತಿ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಅಲ್ಲಿಂದ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ಹೆಸರಲ್ಲಿ ಹಳ್ಳಿ, ತಾಲೂಕು,ಹಾಗೂ ಜಿಲ್ಲಾ ಮಟ್ಟದ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. 1980ರ ಮಾರ್ಚ್ 31 ರಂದು ಹಾಸನದಲ್ಲಿ ಏರ್ಪಡಿಸಲಾಗಿದ್ದ ರೈತರ ಸಮಾವೇಶದಲ್ಲಿ ತಮಿಳುನಾಡಿನ ರೈತ ನಾಯಕರಾದ ನಾರಾಯಣಸ್ವಾಮಿ ನಾಯ್ಡು, ಡಾ. ಶಿವಸ್ವಾಮಿ, ಮಹಾರಾಷ್ಟ್ರದ ಶೋತ್ನರಿ ಸಂಘಟನೆಯ ಶರದ್ ಜೋಶಿ, ಕರ್ನಾಟಕದ ಹೆಚ್.ಎಸ್. ರುದ್ರಪ್ಪ,  ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್, ಮುಂತಾದವರು ಭಾಗವಹಿಸಿದ್ದು ಒಂದು ಮಹತ್ವದ ಘಟನೆ ಎಂದು ಹೇಳಬಹುದು.

ಹಾಸನದ ಸಮಾವೇಶ ನಡೆದ ಕೆಲವೇ ದಿನಗಳಲ್ಲಿ ಬೆಳಗಾವಿಯ ನಿಪ್ಪಾಣಿಯಲ್ಲಿ ಭಾರಿ ದುರ್ಘಟನೆಯೊಂದು ನಡೆಯುತ್ತದೆ. ಶರತ್ ಜೋಶಿಯವರ ನೇತೃತ್ವದಲ್ಲಿ ಈರುಳ್ಳಿ ಬೆಳೆಗಾರರು ನ್ಯಾಯ ಬೆಲೆಗಾಗಿ ನಿಪ್ಪಾಣಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಚಳುವಳಿ ನಡೆಸುತ್ತಿರುತ್ತಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಹಲವು ಕಿಲೋಮೀಟರ್ ತನಕ ವಾಹನಗಳು ಹೆದ್ದಾರಿಯಲ್ಲಿ ತಡೆಯಲ್ಪಡುತ್ತವೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಚಳುವಳಿ ನಿರತ ರೈತರ ಮೇಲೆ ಗೋಲಿಬಾರ್ ನಡೆಸಿದ ಕಾರಣ ಆರು ಜನ ರೈತರು ಸ್ಥಳದಲ್ಲೇ ಪ್ರಾಣ ಬಿಡುತ್ತಾರೆ.

ಏಪ್ರಿಲ್ 11ರಂದು ಹಾಸನದ ದುದ್ದ ಗ್ರಾಮವು ಮತ್ತೊಂದು ದುರಂತಕ್ಕೆ ಸಾಕ್ಷಿ ಆಗುತ್ತದೆ, ಆ ದಿನ ರಾಜ್ಯದಾದ್ಯಂತ ರಸ್ತೆ ತಡೆ ಚಳುವಳಿ ನಡೆಸಲು ನೀಡಿದ್ದ ಕರೆಯ ಮೇರೆಗೆ ದುದ್ದ ದಲ್ಲಿ ರಸ್ತೆ ತಡೆದ ರೈತರ ಮೇಲೆ ಪೊಲೀಸರು ನಡೆಸುತ್ತಿದ್ದ ಗೋಲಿಬಾರ್ ನಲ್ಲಿ ಮೂವರು ರೈತರು  ಅಸುನೀಗುತ್ತಾರೆ. ಹೀಗೆ ರಾಜ್ಯದ ಹಲವು ಸ್ಥಳಗಳಲ್ಲಿ ನಡೆಸಿದ ಗೋಲಿಬಾರ್ ನಿಂದ ಹಲವು ರೈತರು ಹತರಾಗುತ್ತಾರೆ.

ನರಗುಂದ – ನವಲಗುಂದದಿಂದ ಆರಂಭವಾಗಿ ಗದಗ,ರೋಣ,ಗಜೇಂದ್ರಗಡ, ದುದ್ದ, ನಾಗಸಮುದ್ರ, ಗೆಜ್ಜಲಗೆರೆ, ದೊಡ್ಡಳ್ಳಿ ಹೀಗೆ 1980ರ ಜೂನ್ ನಿಂದ 1982ರ ಅಂತ್ಯದೊಳಗೆ ಎರಡುವರೆ ವರ್ಷಗಳ ಅವಧಿಯಲ್ಲಿ ರಾಜ್ಯದ 139 ರೈತರು ಗೋಲಿಬಾರ್ ನಿಂದ ಹುತಾತ್ಮರಾದರೆಂದರೆ ಅಂದಿನ ಗುಂಡೂರಾವ್ ಸರ್ಕಾರ ಎಷ್ಟು ಕ್ರೂರವಾಗಿತ್ತು ಎಷ್ಟು ಅಮಾನವೀಯವಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬಹುದಿತ್ತು.

ಸರಣಿ ಗೋಲಿಬಾರ್ ಗಳ  ನಂತರ ರೈತನಾಯಕರಿಗೆ, ಹುತಾತ್ಮರಾದ ರೈತರ ಕುಟುಂಬಗಳ ಸಂತೈಸುವುದೇ ದೊಡ್ಡ ಸಂಕಟದ ಕೆಲಸವಾಗಿತ್ತು. ಹಾಗಾಗಿ 1981ರಲ್ಲಿ ಹೆಚ್ಚು ಹೋರಾಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯ ಆಗಿರಲಿಲ್ಲ. ರೈತರು ಸಂಕಷ್ಟದಲ್ಲಿದ್ದಾಗ ಸಹಕಾರಿ ಸಂಸ್ಥೆಗಳಿಂದ ಸಾಲದ ಬಾಕಿಗಾಗಿ ರೈತರ ಮನೆಗಳ ಜಫ್ತಿ ಕಾರ್ಯಕ್ರಮ ಶುರುವಾಯಿತು. ರೈತರ ಮನೆಗಳಿಂದ ಸಣ್ಣಪುಟ್ಟ ಪಾತ್ರೆಗಳು, ತೊಟ್ಟಿಲುಗಳನ್ನು ಡಿಸಿಸಿ ಬ್ಯಾಂಕಿನ ಅಧಿಕಾರಿಗಳು ವಶಪಡಿಸಿಕೊಂಡು ಸೊಸೈಟಿಗಳ ಉಗ್ರಾಣಗಳಲ್ಲಿಟ್ಟು ಹೋಗುತ್ತಿದ್ದರು. ಹಾಸನ ಜಿಲ್ಲೆಯಲ್ಲೂ ಇಂಥ ಜಫ್ತಿ ಕಾರ್ಯ ಜೋರಾಗಿ ನಡೆಯುತ್ತಿತ್ತು. ರೈತ ಸಂಘದ ಕಾರ್ಯಕರ್ತರು ಜಫ್ತಿ ಮಾಡುವುದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದರು.

ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಗೆ ಹೊಂದಿಕೊಂಡ ಬನವಾಸೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕಲಾವಿದ ಕೆ.ಟಿ. ಶಿವಪ್ರಸಾದ್ ಅವರಿಗೆ ರೈತ ಮನೆ ಜಫ್ತಿ ಮಾಡಿ ಸೊಸೈಟಿಗಳ ಉಗ್ರಾಣಗಳಲ್ಲಿ ತಂದಿಟ್ಟಿದ್ದ ವಸ್ತುಗಳನ್ನು ರೈತರಿಗೆ ವಾಪಸ್ಸು ಕೊಡಬೇಕೆಂಬ ಯೋಚನೆ ಬಂತು. ರೈತ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಬನವಾಸೆ ರಾಜಶೇಖರ್ ಹಾಗೂ ರಾಜ್ಯ ರೈತ ಸಂಘದ ವಿದ್ಯಾರ್ಥಿ ವಿಭಾಗದ ಸಂಚಾಲಕರಾಗಿದ್ದ ಪಾಂಡುರಂಗ ವಿಠಲ ಅವರೊಂದಿಗೆ ಶಿವಪ್ರಸಾದ್ ಚರ್ಚಿಸಿದ ನಂತರ ಕಾರ್ಯಾಚರಣೆಗಿಳಿದರು.

ಕೆ ಟಿ ಶಿವಪ್ರಸಾದ್, ಆರ್. ಪಿ. ವೆಂಕಟೇಶಮೂರ್ತಿ, ಪಾಂಡುರಂಗ ವಿಠಲ ಅವರ ನೇತೃತ್ವದಲ್ಲಿ 1981 ಡಿಸೆಂಬರ್ ನಲ್ಲಿ ಸ್ಥಳೀಯ ರೈತರು ಸೇರಿ ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿಯ  ಹೊಸೂರು ಸೊಸೈಟಿ ಉಗ್ರಾಣದ ಬೀಗ ಒಡೆದು, ಜಫ್ತಿ ಮಾಡಿ ತಂದಿಟ್ಟಿದ್ದ ವಸ್ತುಗಳನ್ನು ಸಂಬಂಧಪಟ್ಟ ರೈತರಿಗೆ ನೀಡಿ, ರೈತರ ಹೆಸರು ಹಾಗೂ ಅವರಿಗೆ ನೀಡಿದ ವಸ್ತುಗಳ ಪಟ್ಟಿಯನ್ನು ತಯಾರಿಸಿ ಉಗ್ರಾಣದ ಬಾಗಿಲಿಗೆ ಅಂಟಿಸಲಾಯಿತು. ಇದೇ ರೀತಿಯ ಕಾರ್ಯಾಚರಣೆ ಉಚ್ಚಂಗಿ ಗ್ರಾಮದಲ್ಲಿ ನಡೆಯಿತು.

ಹಾಸನ ತಾಲೂಕಿನ ಕುಪ್ಪಳ್ಳಿ, ಹೊಳೆನರಸೀಪುರ ತಾಲೂಕಿನ ತೆರಣ್ಯ ಗ್ರಾಮದಲ್ಲೂ ಮುಂದುವರೆದು, ಹಾಸನ ಜಿಲ್ಲೆಯ ಹಲವಾರು ಕಡೆ ನಡೆದು ಜಿಲ್ಲೆಯಲ್ಲಿ ಭಾರಿ ಸಂಚಲನವುಂಟು ಮಾಡಿತು. ಮುಂದೆ ಮರುಜಫ್ತಿ ಕಾರ್ಯಕ್ರಮವೆಂದು ರಾಜ್ಯದಲ್ಲೆಲ್ಲಾ ಪ್ರಸಿದ್ಧಿ ಪಡೆಯಿತು. ಮರು ಜಫ್ತಿ ಮಾಡಿದ ರೈತ ಮುಖಂಡರು ಹಾಗೂ ರೈತರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಗಳ ಮುಂದೆ ಹಾಜರುಪಡಿಸತೊಡಗಿದ್ದರು.

ರೈತರ ಮೇಲೆ ಭಾರತೀಯ ದಂಡ ಸಂಹಿತೆಯ 395ನೇ ಸೆಕ್ಷನ್ ಪ್ರಕಾರ ಡಕಾಯಿತಿ ಪ್ರಕರಣಗಳು  ದಾಖಲಾಗತೊಡಗಿದವು.

ಮರು ಜಫ್ತಿ ಕಾರ್ಯವು ಒಂದು ಚಳವಳಿಯ ರೂಪ ಪಡೆಯುತ್ತಿದ್ದಂತೆ, ಜಿಲ್ಲಾಡಳಿತ ಕಂಗೆಟ್ಟು ಹೋಯಿತು. ಪೊಲೀಸ್ ಅಧಿಕಾರಿಗಳು ರೈತ ನಾಯಕರನ್ನು ಭೇಟಿ ಮಾಡಿ ತಮ್ಮ ವ್ಯಾಪ್ತಿಯಲ್ಲಿ ಇಂತಹ ಕಾರ್ಯಾಚರಣೆ ಮಾಡಬಾರದೆಂದು ವಿನಂತಿ ಮಾಡತೊಡಗಿದರು. ನೂರಾರು ರೈತರು ಹಸಿರು ಶಾಲು ಹೊದ್ದು ನ್ಯಾಯಾಲಯಗಳಿಗೆ ಹಾಜರಾಗ ತೊಡಗಿದಾಗ, ಇವು ನಿಜವಾಗಿಯೂ ಡಕಾಯಿತಿ ಪ್ರಕರಣ ಅಲ್ಲವೆಂದು ರೈತರ ಆಕ್ರೋಶದ ಅಭಿವ್ಯಕ್ತಿ ಎಂದು ನ್ಯಾಯಾಲಯಗಳಿಗೂ ಮನವರಿಕೆಯಾಗ ತೊಡಗಿತ್ತು. ನ್ಯಾಯಾಧೀಶರಾಗಿದ್ದ  ಶ್ರೀ ಸಂತಾನಂ ಅವರು ರೈತರ ಮೇಲೆ 395ನೇ ಸೆಕ್ಷನ್ ಇದ್ದರೂ ಜಾಮೀನು ಪಡೆದು ಬಿಡುಗಡೆ ಮಾಡತೊಡಗಿದರು.

ಮರು ಜಫ್ತಿ ಚಳವಳಿ ತೀವ್ರತೆ ಪಡೆದಾಗ ರೈತ ಸಂಘಟನೆ ಪ್ರಮುಖರನ್ನು ಹಾಸನ ಜಿಲ್ಲೆಯಿಂದ ಗಡಿಪಾರು ಮಾಡುವ ನಿರ್ಧಾರಕ್ಕೆ ಜಿಲ್ಲಾಡಳಿತ ಬಂತು. ಜಿಲ್ಲಾಧಿಕಾರಿಯಾಗಿದ್ದ ದಿಲೀಪ್ ರಾವ್ ಅವರು ಕೆ.ಟಿ ಶಿವಪ್ರಸಾದ್, ಮಂಜುನಾಥ್ ದತ್ತ, ಆರ್. ಪಿ. ವೆಂಕಟೇಶಮೂರ್ತಿ, ಪಾಂಡುರಂಗ ವಿಠಲ ಹಾಗೂ ಹೆಚ್.ಎಂ. ವಿಶ್ವನಾಥ್ ಅವರಿಗೆ ಗಡಿಪಾರು ನೋಟಿಸ್ ನೀಡಿದರು. ಈ ವಿಷಯವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಾಗ್ವಾದ ನಡೆಯುತ್ತಿದ್ದಾಗ ಜಿಲ್ಲಾಧಿಕಾರಿ ದಿಲೀಪ್ ರಾವ್ ಅವರು ಶಟಪ್ ಎಂದರೆ ಶಿವಪ್ರಸಾದ್ ಅವರು ತಿರುಗಿ ಯೂ ಶಟಪ್ ಎಂದರು.  ವಾತಾವರಣ ಕಾವೇರಿದಾಗ ಪೊಲೀಸರು ಬಂದು ರೈತ ನಾಯಕರನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರಗೆ ಕರೆದುಕೊಂಡು ಹೋಗಬೇಕಾಯಿತು.

ಗಡಿಪಾರು ನೋಟಿಸಿನಿಂದ ಸಿಟ್ಟಿಗೆದ್ದ ರೈತರು ಸಾವಿರಾರು ಸಂಖ್ಯೆಯಲ್ಲಿ ಹಾಸನದ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಆವರಣದಲ್ಲಿ “ಗಡಿಪಾರ್ ಗಡಿಪಾರ್ ಜಿಲ್ಲಾಧಿಕಾರಿಗೆ ಗಡಿಪಾರ್ “ಎಂಬ ಘೋಷಣೆ ಕೂಗಿದರು. ರೈತರ ಪ್ರತಿಭಟನೆ ಜೋರಾಗಬಹುದು ಎಂಬ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಗಡಿಪಾರ್  ನೋಟಿಸನ್ನು ಹಿಂದೆ ಪಡೆಯಿತು.

ಹಾಸನ  ನಗರದ ಹತ್ತಿರದ  ಭೂವನಹಳ್ಳಿ ಗ್ರಾಮದಲ್ಲಿ ರೈತರ ಮನೆ ಜಫ್ತಿ ನಡೆಯುತ್ತಿದೆ ಎಂಬ ಸುದ್ದಿಯ ರೈತ ಸಂಘಟನೆ ಕೇಂದ್ರ ಸ್ಥಾನವಾಗಿದ್ದ ‘ಜನತಾ ಮಾಧ್ಯಮ’ ಕಚೇರಿಗೆ ಬಂತು. ಪತ್ರಿಕಾ ಕಚೇರಿಯಲ್ಲಿದ್ದ ಕೆ.ಟಿ. ಶಿವಪ್ರಸಾದ್, ಆರ್. ಪಿ. ವೆಂಕಟೇಶಮೂರ್ತಿ, ಬನವಾಸೆ ರಾಜಶೇಖರ್ ಹಾಗೂ ಬಾಳ್ಳುಪೇಟೆಯ ಕೆಲವು ರೈತ ಸಂಘದ ಕಾರ್ಯಕರ್ತರು ಒಂದು ಬಾಡಿಗೆ ಕಾರಿನಲ್ಲಿ ಭೂವನಹಳ್ಳಿಯಲ್ಲಿ  ಜಪ್ತಿ ಮಾಡುತ್ತಿದ್ದ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸೊಸೈಟಿ ನೌಕರರನ್ನು ತಡೆದರು.

ಅಧಿಕಾರಿಗಳು ಹಾಗೂ ರೈತನಾಯಕರ ನಡುವೆ ವಾಗ್ವಾದ ನಡೆಯುತ್ತಿದ್ದಾಗ, ಸಿಟ್ಟಿಗೆದ್ದ ಶಿವಪ್ರಸಾದ್ ಡಿಸಿಸಿ ಬ್ಯಾಂಕ್ ಅಧಿಕಾರಿಗೆ ಒಂದು ಏಟು ಕೊಟ್ಟರು. ಪರಿಸ್ಥಿತಿ ಬಿಗಡಾಯಿಸತೊಡಗಿತ್ತು. ಈ ಗ್ರಾಮದಲ್ಲಿ ರೈತ ಸಂಘದ ಘಟಕ ಇರಲಿಲ್ಲ. ಗ್ರಾಮದ ಜನರಲ್ಲಿ ಕೆಲವರು ಬ್ಯಾಂಕ್ ಅಧಿಕಾರಿಗಳ ಪರವಾಗಿಯೇ ವಾದ ಮಾಡ ತೊಡಗಿದರು. ಆ ಹೊತ್ತಿಗೆ ಹಾಸನ ಕೆ.ಆರ್. ಪುರಂ ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಶಿವಪ್ರಸಾದ್, ವೆಂಕಟೇಶಮೂರ್ತಿ ಮುಂತಾದವರನ್ನು ಬಂಧಿಸಿ, ಮರುದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ಹೀಗೆ ಕೆ.ಟಿ. ಶಿವಪ್ರಸಾದ್  ಅವರು ಆರಂಭಿಸಿದ ಕಾರ್ಯಾಚರಣೆಯು ಕರ್ನಾಟಕ ರಾಜ್ಯ ರೈತ ಚಳುವಳಿಗೆ ಒಂದು ಹೊಸ ಆಯಾಮ ನೀಡಿತು. 1982ರಲ್ಲಿ ರೈತ ಚಳುವಳಿ ಬಿರುಸುಗೊಂಡು 1983 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗುಂಡೂರಾವ್ ಸರ್ಕಾರದ ಪತನಕ್ಕೆ ಕಾರಣವಾಯಿತು.

Leave a Reply

Your email address will not be published. Required fields are marked *