ರಾಹುಲ್ ಗಾಂಧಿ ಜೊತೆ ಸಂವಾದದಲ್ಲಿ ಭಾಗಿಯಾಗಲು ನೀಡಿದ್ದ ಆಹ್ವಾನ ನಿರಾಕರಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿನಿ  

ಪುಣೆ (ಮಹಾರಾಷ್ಟ್ರ): ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೆನ್ನೆ ವಿದ್ಯಾರ್ಥಿಗಳ ಜೊತೆ ಸಂವಾದ (ಛತ್ತೋನ್​ ಕಿ ಗೂಂಜ್​) ಕಾರ್ಯಕ್ರಮಕ್ಕಾಗಿ ಪುಣೆಗೆ ಆಗಮಿಸಿದ್ದರು. ಇಲ್ಲಿನ ಇಂಜಿನಿಯರಿಂಗ್​ ಕಾಲೇಜಿನ ಶುಲ್ಕ ಮತ್ತು ಆಡಳಿತ ಮಂಡಳಿಯ ವಿರುದ್ಧ ಧ್ವನಿ ಎತ್ತಿದ್ದ ವಿದ್ಯಾರ್ಥಿನಿಯನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿ, ರಾಹುಲ್​ ಗಾಂಧಿಯನ್ನು ಭೇಟಿಯಾಗಲು ಆಹ್ವಾನ ನೀಡಲಾಗಿತ್ತು. ಆದರೆ, ಈ ಆಹ್ವಾನವನ್ನು ವಿದ್ಯಾರ್ಥಿನಿ ತಿರಸ್ಕರಿಸಿದ್ದಾರೆ.

ಈ ಕುರಿತು ವಿಡಿಯೋ ಸಂದೇಶ ಹರಿಬಿಟ್ಟಿರುವ ವಿದ್ಯಾರ್ಥಿನಿ, “ಸಂವಾದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ರಾಹುಲ್​ ಗಾಂಧಿ ಅವರಿಗೆ ಧನ್ಯವಾದಗಳು. ನಾನು ಸದ್ಯಕ್ಕೆ ಯಾವುದೇ ವಿಷಯದ ಕುರಿತು ಮಾತನಾಡಲು ಮಾನಸಿಕವಾಗಿ ಸಿದ್ಧವಾಗಿಲ್ಲ. ಜೊತೆಗೆ ನಾನು ಸಾಮಾನ್ಯ ವಿದ್ಯಾರ್ಥಿನಿ. ನನ್ನನ್ನು ಯಾರೂ ರಾಜಕೀಯಕ್ಕಾಗಿ ಬಳಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

ಕಾಲೇಜು ಕ್ಯಾಂಪಸ್​ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನನ್ನನ್ನೂ ರಾಜಕೀಯಕ್ಕೆ ಎಳೆಯಬೇಡಿ. ಇದಲ್ಲದೇ, ಪ್ರತಿಭಟನಾಕಾರರು ಮತ್ತು ನನಗೂ ಯಾವುದೇ ಸಂಬಂಧವಿಲ್ಲ. ರಾಜಕೀಯವು, ನಮ್ಮ ಕಾಲೇಜಿನ ವಾತಾವರಣವನ್ನು ಹಾಳು ಮಾಡಿದೆ ಎಂದು ಆಕೆ ಬೇಸರಿಸಿದ್ದಾರೆ.

ಕಾಲೇಜಿನಲ್ಲಿ ಘರ್ಷಣೆ: ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೂ ಮುನ್ನ ಸಿಒಇಪಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಮತ್ತು ಎನ್​ಎಸ್​​ಯುಐ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ.

ರಾಹುಲ್​ ಗಾಂಧಿಯವರ ಭೇಟಿಗಾಗಿ ಕಾಂಗ್ರೆಸ್​ ಮತ್ತು ಎನ್​​ಎಸ್​ಯುಐ ಕಾರ್ಯಕರ್ತರು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಆಗಸ್ಟ್​ 21ರ ತಡರಾತ್ರಿ ಕಾಲೇಜಿನ ಹಾಸ್ಟೆಲ್​ ಆವರಣದಲ್ಲಿ ಉಭಯ ಸಂಘಟನೆಗಳ ನಡುವೆ ಘರ್ಷಣೆ ಏರ್ಪಟ್ಟಿದೆ.

ಗಲಾಟೆಯ ನಂತರ ಪುಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಎಬಿವಿಪಿ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ 50 ಕ್ಕೂ ಅಧಿಕ ಯೂತ್​ ಕಾಂಗ್ರೆಸ್​ ಮತ್ತು ಎನ್​​ಎಸ್​​ಯುಐ ಕಾರ್ಯಕರ್ತರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ.

ರಾಹುಲ್​ ಗಾಂಧಿ ಅವರ ವಿದ್ಯಾರ್ಥಿ ಸಂವಾದ ಕಾರ್ಯಕ್ರಮವಕ್ಕೂ ಮುನ್ನವೇ, ಈ ರಾಜಕೀಯ ಹಗ್ಗಜಗ್ಗಾಟ ಹಾಗೂ ವಿದ್ಯಾರ್ಥಿನಿಯ ನಿರಾಕರಣೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *