ದರ ಪರಿಷ್ಕರಣೆ ಅಧ್ಯಯನ ಸಮಿತಿ ಶೀಘ್ರ ವರದಿ: ಬೈರತಿ ಸುರೇಶ್

ಬೆಂಗಳೂರು: ರಾಜ್ಯದಲ್ಲಿ ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳವಾಗುವ ಸ್ಪಷ್ಟ ಸುಳಿವನ್ನು ಸಾರಿಗೆ ಸಚಿವ ಬೈರತಿ ಸುರೇಶ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಟಿಕೆಟ್ ದರ ಪರಿಷ್ಕರಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರಯಾಣ ದರ ಪರಿಷ್ಕರಣೆಯ ಕುರಿತು ಅಧ್ಯಯನ ನಡೆಸಲು ಅತುಲ್ ಕುಮಾರ್ ತಿವಾರಿ ನೇತೃತ್ವದಲ್ಲಿ ‘ಕರ್ನಾಟಕ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ’ಯನ್ನು ರಚಿಸಲಾಗಿದ್ದು, ಈ ಸಮಿತಿಗೆ ಶೀಘ್ರದಲ್ಲೇ ವರದಿ ಸಲ್ಲಿಸಲು ಸೂಚಿಸಲಾಗಿದೆ. ಸಮಿತಿ ರಚನೆಯಾಗಿ ಈಗಾಗಲೇ 20 ದಿನಗಳು ಕಳೆದಿವೆ. ನಾಲ್ಕೂ ಸಾರಿಗೆ ನಿಗಮಗಳು ಹಾಗೂ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಈ ಸಮಿತಿಯು ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಹಸ್ತಾಂತರಿಸಲಿದ್ದು, ಆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.

ಸಾರಿಗೆ ನಿಗಮಗಳ ಆರ್ಥಿಕ ಹೊರೆಯ ಕುರಿತು ವಿವರಣೆ ನೀಡಿದ ಸಚಿವರು, ಕಳೆದ ಬಾರಿ ಬಸ್ ಪ್ರಯಾಣ ದರ ಪರಿಷ್ಕರಣೆಯಾದ ನಂತರ ಡೀಸೆಲ್ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. ಆದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಪ್ರಯಾಣ ದರವನ್ನು ಹೆಚ್ಚಿಸಿರಲಿಲ್ಲ. ಆದರೆ ಪ್ರಸ್ತುತ ನಾಲ್ಕೂ ಸಾರಿಗೆ ನಿಗಮಗಳು ಒಟ್ಟಾಗಿ ಪ್ರತಿ ವರ್ಷ ಸುಮಾರು 800 ರಿಂದ 1000 ಕೋಟಿ ರೂ. ಭಾರಿ ನಷ್ಟ ಅನುಭವಿಸುತ್ತಿವೆ. ಈ ನಷ್ಟವನ್ನು ಸರಿದೂಗಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಸಾರಿಗೆ ಸಂಸ್ಥೆಗಳ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುತ್ತಾ, ನಮಗೆ ಈ ನಷ್ಟ ಭರಿಸಲು ಹಣ ಎಲ್ಲಿಂದ ಸಿಗಬೇಕು. ದರ ಪರಿಷ್ಕರಣೆ ಮಾಡದಿದ್ದರೆ ನಾವು ನಿಗಮಗಳನ್ನೇ ಮುಚ್ಚಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಅತುಲ್ ಕುಮಾರ್ ತಿವಾರಿ ಸಮಿತಿಯ ವರದಿ ಬಂದ ತಕ್ಷಣವೇ ಮುಖ್ಯಮಂತ್ರಿಗಳೊಂದಿಗೆ ವಿವರವಾದ ಚರ್ಚೆ ನಡೆಸಿ, ಸಚಿವ ಸಂಪುಟ ಸಭೆಯ ಮುಂದಿಟ್ಟು ಟಿಕೆಟ್ ದರ ಏರಿಕೆಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *