ನೀರಾವರಿ ಯೋಜನೆ ಪೂರ್ಣಗೊಳಿಸಿ ರೈತರಿಗೆ ನೀರು ಒದಗಿಸಲು ಆಗ್ರಹ

ಹಾಸನ: ಹಲವು ವರ್ಷಗಳ ಹಿಂದೆ ಮಂಜೂರಾದ ನೀರಾವರಿ ಯೋಜನೆಯ ಚಾನಲ್ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದರಿಂದ ರೈತರಿಗೆ ಯೋಜನೆಯ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಕೂಡಲೇ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಕಣಗಾಲ್ ಮೂರ್ತಿ ಅವರು ಆಗ್ರಹಿಸಿದರು.

ಸುಮಾರು 2013 ರಲ್ಲಿ ಯೋಜನೆಗೆ ಚಾನಲ್ ಕಾಮಗಾರಿ ಕೈಗೊಳ್ಳಲಾಗಿದ್ದು, ಅಂದಾಜು ಮೊತ್ತವನ್ನು ವಿವಿಧ ಹಂತಗಳಲ್ಲಿ ನಿಗದಿಪಡಿಸಲಾಗಿತ್ತು. ಯೋಜನೆ ಪೂರ್ಣಗೊಂಡು ನೀರು ಹರಿಯಬೇಕಾಗಿದ್ದರೂ, ಇದುವರೆಗೆ ಚಾನಲ್ ಕಾಮಗಾರಿ ಸಂಪೂರ್ಣಗೊಂಡಿಲ್ಲ. ಇದರಿಂದ ಯೋಜನೆಯ ಉದ್ದೇಶವೇ ಈಡೇರದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಚನ್ನರಾಯಪಟ್ಟಣ, ಹೊಳೆನರಸೀಪುರ ಸೇರಿದಂತೆ ಇತರೆ ತಾಲೂಕುಗಳಲ್ಲಿ ಸಂಬಂಧಿಸಿದ ನೀರಾವರಿ ಕಾಮಗಾರಿಗಳು ಪೂರ್ಣಗೊಂಡು ರೈತರಿಗೆ ನೀರು ದೊರೆಯುತ್ತಿರುವುದನ್ನು ಉಲ್ಲೇಖಿಸಿದ ಅವರು, ನಮ್ಮ ತಾಲೂಕಿಗೂ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

 

ಯೋಜನೆಯ ಕಾಮಗಾರಿ ವಿಳಂಬಕ್ಕೆ ಕಾರಣವೇನು ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಕೆಲವು ಕಡೆ ರಸ್ತೆ ಕಾಮಗಾರಿ ಹಾಗೂ ಅಂದಾಜು ಬದಲಾವಣೆ ಸೇರಿದಂತೆ ತಾಂತ್ರಿಕ ಸಮಸ್ಯೆಗಳಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ ಚಾನಲ್ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ ಎಂದರು. ನೀರಾವರಿ ಯೋಜನೆ ಪೂರ್ಣಗೊಂಡರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರು ಲಭ್ಯವಾಗಲಿದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಯಾವುದೇ ವಿಳಂಬ ಮಾಡದೆ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಣಗಾಲ್ ಮೂರ್ತಿ, ಮಂಜು, ಪಾಲಾಕ್ಷ, ಸುರೇಶ್, ಅಣ್ಣಪ್ಪ, ದರ್ಶನ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *