ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು: ಬೇಲೂರಿನಲ್ಲಿ ಘಟನೆ

ಬೇಲೂರು: ಆಹಾರ ಅರಸಿ ಬಂದಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಅಂದಾಜು 35 ವರ್ಷದ ಹೆಣ್ಣಾನೆಯೊಂದು ವಿದ್ಯುತ್ ಶಾಕ್‌ಗೆ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಕೋಗಿಲಮನೆ ಗ್ರಾಮದ ಬಳಿ ನಡೆದಿದೆ.

ಕೋಗಿಲಮನೆ ಗ್ರಾಮದ ಶಶಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು ಎನ್ನಲಾಗಿದೆ. ಆಹಾರ ಅರಸಿ ಬಂದಿದ್ದ ಕಾಡಾನೆಗಳ ಹಿಂಡು ಜಮೀನಿನ ಮೂಲಕ ತೆರಳುತ್ತಿದ್ದ ವೇಳೆ, ಉಳಿದ ಆನೆಗಳು ವಿದ್ಯುತ್ ತಂತಿಯನ್ನು ತಪ್ಪಿಸಿಕೊಂಡು ಮುಂದೆ ಸಾಗಿವೆ. ಈ ವೇಳೆ ದೈತ್ಯಾಕಾರದ ಹೆಣ್ಣಾನೆಯ ಸೊಂಡಿಲು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ ತಗುಲಿದ್ದು, ವಿದ್ಯುತ್ ಪ್ರವಹಿಸಿ ಆನೆ ಸ್ಥಳದಲ್ಲೇ ಮೃತಪಟ್ಟಿದೆ ಎನ್ನಲಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಆನೆಯ ಸಾವಿಗೆ ನಿಖರ ಕಾರಣ ಹಾಗೂ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *