ಖಾಸಗಿ ದೇವಾಲಯಗಳಂತೆ ಮಸೀದಿ, ಚರ್ಚ್‌ಗಳಿಗೂ ಧಾರ್ಮಿಕ ಕಾನೂನು ರೂಪಿಸಲಿ

ಹಾಸನ: ದೇಶದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿದ್ದು, ಧಾರ್ಮಿಕ ವಿಚಾರಗಳಲ್ಲಿಯೂ ಸಮಾನ ನೀತಿ ಜಾರಿಯಾಗಬೇಕು. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ದೇವಸ್ಥಾನಗಳನ್ನು ತರುವ ಮಾದರಿಯಲ್ಲಿ ಚರ್ಚ್, ಮಸೀದಿ ಹಾಗೂ ದರ್ಗಾಗಳಿಗೂ ಧಾರ್ಮಿಕ ನೀತಿ ರೂಪಿಸಿ ಸರ್ಕಾರದ ಅಧೀನಕ್ಕೆ ತರಬೇಕು ಎಂದು ಅಖಿಲ ಕರ್ನಾಟಕ ಖಾಸಗಿ ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟ ಸಂಘದ ದೀಕ್ಷಿತ್ ಅವರು ಆಗ್ರಹಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಕೇಂದ್ರಗಳಿಗೆ ಸರ್ಕಾರದ ವತಿಯಿಂದ ಅಧಿಕಾರಿಗಳನ್ನು ನೇಮಿಸುವುದರಿಂದ ಆಡಳಿತದಲ್ಲಿ ಪಾರದರ್ಶಕತೆ ಮೂಡಲಿದ್ದು, ಹಣಕಾಸಿನ ವ್ಯವಹಾರಗಳು ಸರ್ಕಾರದ ಗಮನಕ್ಕೆ ಬರಲಿವೆ ಎಂದು ಹೇಳಿದರು. ಮದರಸಾಗಳಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತ ಶಿಕ್ಷಣದ ಕುರಿತು ಬಹಿರಂಗ ಮಾಹಿತಿ ನೀಡಬೇಕು ಎಂದರು.

ಹಿಂದೂ ಧರ್ಮದ ಬಲವರ್ಧನೆಗಾಗಿ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸಿ, ಬಾಲ್ಯಾವಸ್ಥೆಯಿಂದಲೇ ಮಕ್ಕಳಿಗೆ ರಾಮಾಯಣ, ಮಹಾಭಾರತ ಸೇರಿದಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಚಾರಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಅಲ್ಪಸಂಖ್ಯಾತ ಧಾರ್ಮಿಕ ಕೇಂದ್ರಗಳಿಗೆ ಬರುತ್ತಿರುವ ವಿದೇಶಿ ಹಣಕಾಸಿನ ಕುರಿತು ಸಮಗ್ರ ತನಿಖೆ ನಡೆಸಬೇಕು. ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳನ್ನು ಮುಕ್ತಗೊಳಿಸಿ, ಹಿಂದೂಗಳ ಟ್ರಸ್ಟ್‌ಗಳನ್ನು ರಚಿಸಿ ದೇವಾಲಯಗಳ ಅಭಿವೃದ್ಧಿಗೆ ಸರ್ಕಾರ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎಂ.ಎಸ್.ವಿ. ದೀಕ್ಷಿತ್, ಶ್ರೀನಿವಾಸ್, ವಿಜಯಕುಮಾರ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *