ಚಾಮುಂಡಿಬೆಟ್ಟ ಅಭಿವೃಧ್ಧಿ ಪ್ರಾಧಿಕಾರದ ವಿರುದ್ದ ಭಕ್ತರ ಆಕ್ರೋಶ

ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಕೊನೆಯ ಶುಕ್ರವಾರ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಕಳೆದ ಐದು ವರ್ಷಗಳಿಂದ ಅನ್ನ ದಾಸೋಹ ಮಾಡುತ್ತಿರುವ ತನಗೆ ನೋವು ಉಂಟು ಮಾಡಿದೆ ಎಂದು ಬೆಂಗಳೂರಿನ ಜಿ. ಕೆ. ಫೌಂಡೇಷನ್ ಮುಖ್ಯಸ್ಥ ಹಾಗೂ ಉದ್ಯಮಿ ಮಹೇಶ್ .ಜಿ ಗಂಭೀರ ಆರೋಪ ಮಾಡಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷ ಆಷಾಢ ಮಾಸದ ನಾಲ್ಕನೇ ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಅನ್ನದಾನ ಮಾಡುತ್ತಿದ್ದೇನೆ. ಇದಕ್ಕಾಗಿ ವಾರ್ಷಿಕವಾಗಿ ಸುಮಾರು 30 ಲಕ್ಷ ರೂ. ವೆಚ್ಚ ಮಾಡುತ್ತಿದ್ದೇನೆ. ಆದರೆ ಈ ಬಾರಿ ಅನ್ನದಾನಕ್ಕಾಗಿ ಆಗಮಿಸಿದ್ದ ತಮ್ಮ ಕುಟುಂಬಸ್ಥರಿಗೆ ಮತ್ತು ಸ್ನೇಹಿತರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ಈ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಅವರ ವಿರುದ್ಧ ಮಹೇಶ್ ಅವರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಕಳೆದ ಐದು ವರ್ಷಗಳಿಂದ ಸಾವಿರಾರು ಭಕ್ತರಿಗೆ ಅನ್ನದಾನ ಮತ್ತು ನಾಲ್ಕು ವರ್ಷಗಳ ಕಾಲ ಹೂವಿನ ಅಲಂಕಾರ ಸೇವೆಯನ್ನು ಮಾಡುತ್ತಾ ಬಂದಿರುವ ನನಗೆ ಈ ಬಾರಿ ಎದುರಾದ ಪರಿಸ್ಥಿತಿ ನೋವು ತಂದಿದೆ. ದಾಸೋಹದ ಹಿಂದಿನ ದಿನ ಪ್ರಾಧಿಕಾರದವರು ‘ನಾಳೆ ಬೆಳಗ್ಗೆ ನೀವು 5 ಗಂಟೆಗೆ ಬನ್ನಿ ನಿಮಗೆ ವಾಹನ ಅನುಮತಿ ಮತ್ತು ದರ್ಶನದ ವ್ಯವಸ್ಥೆಯನ್ನು ನಾವು ಮಾಡಿಕೊಡುತ್ತೇವೆ’ ಎಂದು ಹೇಳಿದ್ದರು. ಆ ಪ್ರಕಾರವಾಗಿ ನಾವು ದಿನಾಂಕ 07-08-2026 ರಂದು ಬೆಳಗ್ಗೆ ಐದು ಗಂಟೆಗೆ ಬೆಟ್ಟದ ಕೆಳಗಡೆ ಇರುವ ತಾವರೆಕಟ್ಟೆ ಎಂಬಲ್ಲಿಗೆ ಬಂದಾಗ ಪೊಲೀಸರು ನಾಕಾಬಂಧಿ ಹಾಕಿದ್ದು ನಮ್ಮ ಗಾಡಿಯನ್ನು ಸುಮಾರು 30 ನಿಮಿಷ ತಡೆದು ನಿಲ್ಲಿಸಿದರು. ನಂತರ ಒಬ್ಬ ಪೊಲೀಸ್ ಬಂದು ನಿಮ್ಮ ಗಾಡಿಯ ಅನುಮತಿ ಇದೆ ಎಂದು ಹೇಳಿ ಒಳಗಡೆ ಬಿಟ್ಟಿರುತ್ತಾರೆ.
‎
‎ಅಲ್ಲಿಂದ ತಾಯಿಯ ದರ್ಶನ ಮಾಡಲು ಮಹಿಷಾಸುರ ಮೂರ್ತಿ ಇರುವ ಜಾಗಕ್ಕೆ ಬಂದಾಗ ಅಲ್ಲಿ ಪೊಲೀಸರು ಮತ್ತೆ ನಮ್ಮನ್ನು ತಡೆದು ನಿಲ್ಲಿಸಿದ್ರು. ಸ್ಥಳಕ್ಕೆ ಬಂದ ಪ್ರಾಧಿಕಾರದ ಕಾರ್ಯದರ್ಶಿ ರೂಪ ‘ಯಾರ್ರೀ ನಿಮ್ಮನ್ನು ಬರೋಕೆ ಹೇಳಿದ್ದು? ಇವಾಗ ದರ್ಶನ ಆಗಲ್ಲ’ ಎಂದು ಏರು ಧ್ವನಿಯಲ್ಲಿ ಮಾತನಾಡಿದಾಗ, ನಾವು ವಿನಯದಿಂದ ‘ಏನ್ ಮೇಡಂ ನಾವು ದಾಸೋಹದವರು, ನಿಮ್ಮ ಪ್ರಾಧಿಕಾರದವರೇ ನಮ್ಮನ್ನು ಈ ಸಮಯಕ್ಕೆ ಬರಲು ಹೇಳಿದ್ದರು. ಎಂದಾಗ ಹಾಗಾದರೆ ನೀವು ಒಬ್ಬರೇ ಬನ್ನಿ ಎಂದು ಹೇಳಿ ನಮ್ಮ ಕುಟುಂಬದ ಸದಸ್ಯರ ಎದುರಿಗೆ ನನಗೆ ಅವಮಾನ ಮಾಡಿದರು. ನಂತರ ನಮ್ಮ ಜೊತೆ ಬಂದವರೆಲ್ಲ 2ಸಾವಿರ ರೂ.ಟಿಕೇಟ್ ತೆಗೆದು ತಾಯಿಯ ಮಾಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

‎ಅನ್ನದಾಸೋಹ ನಡೆಯುವ ಸಂದರ್ಭದಲ್ಲಿ ಬೆಳೆಗೆ 7 ರಿಂದ 8 ಗಂಟೆಯ ಸುಮಾರಿಗೆ ಎರಡು ಜನ ನಮ್ಮ ಅನುಮತಿ ಇಲ್ಲದೆ ನಮ್ಮ ಪಾಕ ಶಾಲೆಗೆ ನುಗ್ಗಿ ನಾವು ತಯಾರಿಸಿದ ಉಪಹಾರವನ್ನು ದೊಡ್ಡ ಪಾತ್ರೆಗಳಲ್ಲಿ ತುಂಬಿಸುತಿದ್ದರು. ಆ ಸಂದರ್ಭದಲ್ಲಿ ಅಲ್ಲಿಯ ಮೇಲ್ವಿಚಾರಣೆ ನಡೆಸುತ್ತಿದ್ದ ನಮ್ಮ ತಂಡದ ಮುಕುಂದ ಎಂಬವರು ‘ಯಾರು ನೀವು? ಯಾಕೆ ಆಹಾರ ತುಂಬಿಸುತ್ತಿದ್ದೀರಿ? ಎಂದು ಅವರಲ್ಲಿ ಕೇಳಿದಾಗ ‘ನೀನ್ ಯಾವನೋ ಕೇಳೋದಕ್ಕೆ, ನಾವು ಪೊಲೀಸ್ ನವರು ನಮ್ಮನ್ನು ಕೇಳುತ್ತೀಯಾ? ಎಂದು ಮೇಲ್ವಿಚಾರಕನ ಮೇಲೆ ಕೈಮಾಡಲು ಪ್ರಯತ್ನಿಸಿದರು. ಆಗ ಅಲ್ಲಿಗೆ ಸಮವಸ್ತ್ರ ಧರಿಸಿದ್ದ ರಘು ಎಂಬ ಪೊಲೀಸ್ ಪೇದೆ ಬಂದು ನಮ್ಮ ಕಾರ್ಯಕರ್ತರ ಮೇಲೆ ದರ್ಪ ತೋರಿಸಿ ದಬ್ಬಾಳಿಕೆ ನಡೆಸಲು ಪ್ರಯತ್ನಿಸುತ್ತಾರೆ.
‎
‎ಸಂಜೆ ಸುಮಾರು 4 ಗಂಟೆಗೆ ನನ್ನ ಮಗ ಮತ್ತು ದಾಸೋಹದ ಸೇವೆಯಲ್ಲಿ ತೊಡಗಿದ್ದ ಸ್ವಯಂಸೇವಕರು ತಾಯಿಯ ದರ್ಶನಕ್ಕೆ ಹೋಗುವಾಗ ಅಲ್ಲಿದ್ದ ಪ್ರಾಧಿಕಾರದ ಒಬ್ಬ ಸಿಬ್ಬಂದಿ ತಡೆದು ನಿಲ್ಲಿಸಿ ‘ಯಾವುದೇ ಕಾರಣಕ್ಕೂ ದಾಸೋಹದವರನ್ನು ಒಳಗೆ ಬಿಡಬೇಡಿ, ಆವರು 2ಸಾವಿರ ರುಪಾಯಿಯ ಟಿಕೆಟ್ ತೆಗದು ಹೋಗಲಿ, ನಮಗೆ ರೂಪ ಮೇಡಮ್ ಖಡಕ್ ಸೂಚನೆ ನೀಡಿದ್ದಾರೆ’ ಎಂದು ಹೇಳಿದರು. ಆ ಸಮಯದಲ್ಲಿ ಪ್ರಾಧಿಕಾರದ ಉಳಿದ ಸಿಬ್ಬಂದಿಗಳು ಅವರಲ್ಲಿ ‘ಹೋಗ್ಲಿ ಬಿಡಿ ಅವರು ದಾಸೋಹದವರು’ ಎಂದು ಹೇಳಿದಾಗಲೂ ಅವರ ಮಾತನ್ನು ಕೇಳದೆ ಒಳಗೆ ಬಿಡಲಿಲ್ಲ. ನಂತರ ಅವರು 2 ಸಾವಿರ ಕೊಟ್ಟು ಟಿಕೆಟ್ ಪಡೆದು ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಗರ್ಭಗುಡಿಯತ್ತ ಹೋಗುವ ಸಮಯದಲ್ಲಿ ಅದೇ ಪ್ರಾಧಿಕಾರದ ಅದೇ ಸಿಬ್ಬಂದಿ ಅಲ್ಲಿಗೂ ಬಂದು ‘ಒಳಗಡೆ ನೀವು ಹೇಗೆ ದರ್ಶನ ಮಾಡ್ತೀರಾ ನಾನು ನೋಡ್ತೀನಿ ‘ ಎಂದು ಹೇಳಿ ಬೆಳಿಗ್ಗೆ ಪಾಕಶಾಲೆಗೆ ಬಂದು ಗಲಾಟೆ ಎಬ್ಬಿಸಿದ್ದ ರಘು ಎಂಬ ಪೊಲೀಸ್ ಪೇದೆಯನ್ನು ಕರೆದು ನಮ್ಮವರನ್ನು ಹಿಂಬಾಲಿಸಿಕೊಂಡು ಬಂದು ಅಲ್ಲಿದ್ದ ಪೊಲೀಸ್ ಹಿರಿಯ ಪೊಲೀಸ್ ಅಧಿಕಾರಿ ಅವರಲ್ಲಿ ಅವರನ್ನು ಗುರುತು ಮಾಡಿ ತೋರಿಸುತ್ತಾರೆ. ದರ್ಶನ ಮಾಡುವ ಸಂದರ್ಭದಲ್ಲಿ ಆ ಹಿರಿಯ ಪೊಲೀಸ್ ಅಧಿಕಾರಿ ನನ್ನ ಮಗನ ಮೇಲೆ ಕೈ ಮಾಡಿ ದೂಡಿರುತ್ತಾರೆ. ಆಗ ಅಲ್ಲಿದ್ದ ಸ್ಥಳೀಯ ಪತ್ರಕರ್ತರು ಮತ್ತು ಭಕ್ತಾಧಿಗಳು ಹಿರಿಯ ಪೊಲೀಸ್ ಅಧಿಕಾರಿ ಮತ್ತು ಪೊಲೀಸರನ್ನು ತರಾಟೆಗೆ ತೆಗೆದು ಕೊಳ್ಳುತ್ತಾರೆ. ನಂತರ ಅದೇ ಹಿರಿಯ ಪೊಲೀಸ್ ಅಧಿಕಾರಿ ನನ್ನ ಮಗನ ಬಳಿ ಬಂದು ಸಮಾಧಾನದಿಂದ ‘ಬನ್ನಿ ನಾನು ದರ್ಶನ ಮಾಡಿಸುತ್ತೇನೆ ಎಂದು ಹೇಳಿದಾಗ ಮನನೊಂದ ನನ್ನ ಮಗ ನನಗೆ ದರ್ಶನ ಬೇಡ. ನಾನು ಇಲ್ಲಿಂದಲೇ ತಾಯಿಗೆ ಕೈ ಮುಗಿಯುತ್ತೇನೆ ಎಂದು ಹೇಳಿ ಕಣ್ಣೀರಿಟ್ಟು ಹೊರ ಬರುತ್ತಾನೆ.
‎
‎ನಾವು ಸತತ ಐದು ವರ್ಷಗಳಿಂದ ನಾವು ನಂಬಿರುವ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಸುಮಾರು 30 ಲಕ್ಷ ವೆಚ್ಚದಲ್ಲಿ ಆಷಾಡ ಮಾಸದ ಕೊನೆಯ ಶುಕ್ರವಾರದಂದು ಅನ್ನದಾನ ಸೇವೆಯನ್ನು ಮತ್ತು ಸುಮಾರು ನಾಲ್ಕು ವರ್ಷಗಳ ಕಾಲ ಹೂವಿನ ಅಲಂಕಾರ ಸೇವೆಯನ್ನು ಸ್ವಯಂ ಪ್ರೇರಿತನಾಗಿ ಮಾಡುತ್ತಾ ಬಂದಿರುತ್ತೇವೆ. ಈ ವರ್ಷ ನಮಗೆ ಶ್ರೀ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಮತ್ತು ಸಿಬ್ಬಂದಿಗಳು ಈ ತರಹದ ಅವಮಾನ ಮತ್ತು ಪೊಲೀಸರು ನಮ್ಮ ಮೇಲೆ ತೋರಿದ ದರ್ಪ ದಬ್ಬಾಳಿಕೆಯನ್ನು ತಾಯಿ ಚಾಮುಂಡೇಶ್ವರಿಗೆ ನೋಡಿಕೊಳ್ಳಬೇಕು ಎಂದು ನಾನು ನನ್ನ ಕುಟುಂಬದ ಸದಸ್ಯರು, ನನ್ನ ಸ್ನೇಹಿತರು ಮತ್ತು ದಾಸೋಹ ಕಾರ್ಯದಲ್ಲಿ ನಮಗೆ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದವರ ಪರವಾಗಿ ಪ್ರಾರ್ಥಿಸುತ್ತೇನೆ ಎಂದು ಅಳಲು ತೋಡಿಕೊಂಡರು.

 

Leave a Reply

Your email address will not be published. Required fields are marked *