ಅಣಬೆ ಬೇಸಾಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ವರದಿ: ವಿಶ್ವಜಿತ್, ವಿದ್ಯಾರ್ಥಿ, ಕಾರೇಕೆರೆ ಕೃಷಿ ಕಾಲೇಜು.

ಚನ್ನರಾಯಪಟ್ಟಣ: ಅಣಬೆ ಕೃಷಿ (Mushroom Cultivation) ಕಡಿಮೆ ಜಾಗದಲ್ಲಿ ಮತ್ತು ತುಲನಾತ್ಮಕವಾಗಿ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಕೃಷಿ ಉದ್ಯಮ ಎಂದು ಸಂಪನ್ಮೂಲ ವ್ಯಕ್ತಿ ಡಾ. ಗುರುಮೂರ್ತಿ ಹೇಳಿದರು.

ಊಪಿನಹಳ್ಳಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿದ್ದ, ಅಣಬೆ ಬೇಸಾಯದ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಣಬೆ ಬೇಸಾಯವು ಕಡಿಮೆ ಸ್ಥಳದಲ್ಲಿ ಕೈಗೊಳ್ಳಬಹುದಾದ ಹಾಗೂ ಕಡಿಮೆ ಅವಧಿಯಲ್ಲಿ ಉತ್ಪಾದನೆ ಪಡೆಯಬಹುದಾದ ಪರ್ಯಾಯ ಕೃಷಿ ಚಟುವಟಿಕೆ, ರೈತರಿಗೆ ಹೆಚ್ಚುವರಿ ಆದಾಯದ ಮೂಲದ ಜೊತೆಗೆ ಆದಾಯ ಮೂಲವಾಗಿದೆ.

ಕರ್ನಾಟಕದಲ್ಲಿ ಸಾಮಾನ್ಯವಾಗಿ ಆಯಿಸ್ಟರ್ ಅಣಬೆ, ಮಿಲ್ಕಿ ಅಣಬೆ ಮತ್ತು ಬಟನ್ ಅಣಬೆ ಬೆಳೆಸಬಹುದು.ಆರಂಭಿಕರಿಗೆ ಆಯಿಸ್ಟರ್ ಅಣಬೆ ಉತ್ತಮ ಆಯ್ಕೆ. ಸಾಮಾನ್ಯವಾಗಿ ಭತ್ತದ ಹುಲ್ಲನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಬಿಸಿ ನೀರಿನಿಂದ ಶುದ್ಧೀಕರಿಸಿ, ತೇವಾಂಶ ಸರಿಪಡಿಸಿ, ಅಣಬೆ ಬೀಜ (spawn) ಜೊತೆ ಪದರಗಳಾಗಿ ಪಾಲಿಥಿನ್ ಚೀಲದಲ್ಲಿ ತುಂಬಲಾಗುತ್ತದೆ. ನಂತರ ಚೀಲಗಳನ್ನು ಸ್ವಚ್ಛವಾದ, ತೇವಾಂಶ ಮತ್ತು ಗಾಳಿಯಾಡುವಿಕೆ ನಿಯಂತ್ರಿತ ಕೊಠಡಿಯಲ್ಲಿ ಇಡುತ್ತಾರೆ. ಸೂಕ್ತ ಪರಿಸ್ಥಿತಿಯಲ್ಲಿ ಕೆಲವು ವಾರಗಳಲ್ಲಿ ಕೊಯ್ಲು ಪ್ರಾರಂಭವಾಗುತ್ತದೆ ಎಂದರು. ಇದನ್ನು ಓದಿರಿ: ಊಪಿನಹಳ್ಳಿ ಅಂಗಾಂಶ ಕೃಷಿ ಸಸಿಗಳ ಮಹತ್ವ ಕಾರ್ಯಗಾರ

ನಮ್ಮ ವಾಟ್ಸಪ್ ಚಾನಲ್ ಫಾಲೋ ಮಾಡಿ

ಮುಖ್ಯವಾಗಿ ಉತ್ತಮ ಗುಣಮಟ್ಟದ spawn, ಸ್ವಚ್ಛತೆ, ಸರಿಯಾದ ತಾಪಮಾನ ಮತ್ತು ತೇವಾಂಶ, ಗಾಳಿಯಾಡುವಿಕೆ ಹಾಗೂ ಮಾರುಕಟ್ಟೆ ವ್ಯವಸ್ಥೆ, ದೊಡ್ಡ ಪ್ರಮಾಣದಲ್ಲಿ ಆರಂಭಿಸುವ ಮೊದಲು 10–20 ಚೀಲಗಳಿಂದ ಪ್ರಯೋಗಾತ್ಮಕವಾಗಿ ಬೆಳೆಸಿ ಅನುಭವ ಪಡೆಯುವುದು ಉಪಯುಕ್ತ ಎಂದರು.

ನಂತರ ಅಣಬೆ ಬೇಸಾಯದ ಪ್ರಾಯೋಗಿಕ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು. ಅಣಬೆ ಬೆಳೆಯಲು ಬಳಸುವ ಮಾಧ್ಯಮವನ್ನು ಸಿದ್ಧಪಡಿಸುವುದು, ಬೀಜವನ್ನು ಹಾಕುವುದು, ಚೀಲವನ್ನು ಸಿದ್ಧಪಡಿಸುವುದು ಹಾಗೂ ಬೆಳೆಯುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳನ್ನು ಹಂತ ಹಂತವಾಗಿ ತೋರಿಸಲಾಯಿತು.

ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ಗ್ರಾಮದ ರೈತರು ಉತ್ಸಾಹದಿಂದ ಭಾಗವಹಿಸಿ, ಅಣಬೆ ಬೇಸಾಯದ ವಿವಿಧ ಹಂತಗಳನ್ನು ಸ್ವತಃ ಮಾಡಿ ಕಲಿತರು. ರೈತರು ತಮ್ಮ ಅನುಮಾನಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.

ಒಟ್ಟಿನಲ್ಲಿ, ಈ ಕಾರ್ಯಕ್ರಮದ ಮೂಲಕ ರೈತರಿಗೆ ಅಣಬೆ ಬೇಸಾಯದ ಬಗ್ಗೆ ಪರಿಪೂರ್ಣ ಜ್ಞಾನ ಹಾಗೂ ಪ್ರಾಯೋಗಿಕ ಅನುಭವ ದೊರೆಯಿತು. ರೈತರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

Leave a Reply

Your email address will not be published. Required fields are marked *