ಮಸೀದಿಯಲ್ಲಿ ಹೇಳಿ ತಾವೇ ಗೆಲ್ಲಬಹುದಿತ್ತಲ್ಲ? ಯಾಕೆ ಸೋತರು? -ಶಿವರಾಜ ತಂಗಡಗಿ

ಕೊಪ್ಪಳ/ಗಂಗಾವತಿ: ಮಸೀದಿಯಲ್ಲಿ ಹೇಳಿದರೆ ಯಾರನ್ನಾದರೂ ಸೋಲಿಸಬಹುದಿತ್ತು. ಆದರೆ ಆ ರೀತಿ ಮಾಡಿಲ್ಲ ಎನ್ನುವ ಇಕ್ಬಾಲ್ ಅನ್ಸಾರಿಯವರು ಮಸೀದಿಯಲ್ಲಿ ಹೇಳಿ ತಾವೇ ಗೆಲ್ಲಬಹುದಿತ್ತಲ್ಲ? ಯಾಕೆ ಸೋತರು? ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಬುಧವಾರ ಬರ ಪರಿಸ್ಥಿತಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು-ಗೆಲುವು ಒಬ್ಬಿಬ್ಬರು ವ್ಯಕ್ತಿಗಳಿಂದ ನಿರ್ಧಾರ ಆಗಲ್ಲ. ಕ್ಷೇತ್ರದ ಮತದಾರರ ನಿರ್ಣಯದ ಮೇರೆಗೆ ಸೋಲು-ಗೆಲುವು ನಿರ್ಧಾರ ಆಗುತ್ತದೆ. ಅನ್ಸಾರಿಯವರು ಮಂತ್ರಿಯಾಗಿ ಕೆಲಸ ಮಾಡಿದವರು. ಚಿಕ್ಕಮಕ್ಕಳ ಥರ ತಮ್ಮ ಮೇಲೆ, ರಾಯರಡ್ಡಿ-ಹಿಟ್ನಾಳ ಅವರು ಸೋಲಿಸಿದರು ಎಂದು ಹೇಳುವುದು ಸರಿಯಲ್ಲ ಎಂದು ಗುಡುಗಿದರು.

ಚುನಾವಣೆ ಸಂದರ್ಭದಲ್ಲಿ ಅವರನ್ನು ಭೇಟಿಯಾಗಲು ಅವರ ಮನೆಗೆ ಅಮರೇಗೌಡ ಬಯ್ಯಾಪುರ ಹಾಗೂ ತಾವು ಹೋದಾಗ ಮಹಡಿಯಲ್ಲಿದ್ದವರು ಸುಮಾರು ಹೊತ್ತಾದರೂ ಕೆಳಗೆ ಬರಲೇ ಇಲ್ಲ. ಪಕ್ಷದ ನಾಯಕರೊಂದಿಗೆ ಹೀಗೆ ವರ್ತಿಸುವ ಅನ್ಸಾರಿ, ಮತದಾರರೊಂದಿಗೆ ಹೇಗೆ ಇರುತ್ತಾರೆ ಎಂಬುದನ್ನು ಊಹಿಸಬಹುದು ಎಂದು ಕಿಡಿ ಕಾರಿದರು.

ಹಿಟ್ನಾಳ ಸಹ ಅರ್ಹರು:

ಜಿಲ್ಲೆಯಿಂದ ಮೂವರು ಶಾಸಕರ ಪೈಕಿ ಇಬ್ಬರಿಗೆ ಸಚಿವ ಸ್ಥಾನ ಸಿಕ್ಕಿದೆ. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಸಹ ಮಂತ್ರಿಯಾಗಲು ಅರ್ಹರು. ಸಾಮಾಜಿಕ ನ್ಯಾಯದ ಆಧಾರದಲ್ಲಿ ಹಾಗೂ ಪ್ರಯತ್ನಾನುಸಾರ ಸಚಿವ ಸ್ಥಾನ ಹಂಚಿಕೆ ಆಗಿದೆ. ರಾಘವೇಂದ್ರ ಹಿಟ್ನಾಳ ಅವರಿಗೆ ಖಂಡಿತವಾಗಿ ಉನ್ನತ ಸ್ಥಾನಮಾನಗಳು ದೊರಕಲಿವೆ. ಹಿಟ್ನಾಳ ಬೆಂಬಲಿಗರ ಸಾಮೂಹಿಕ ರಾಜೀನಾಮೆ ಕುರಿತು ಪಕ್ಷದ ಹೈಕಮಾಂಡ್ ನಿರ್ಣಯಿಸುತ್ತದೆ.

  • ಶಿವರಾಜ ತಂಗಡಗಿ, ಸಚಿವ.

Leave a Reply

Your email address will not be published. Required fields are marked *