ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ ಗ್ಯಾರಂಟಿ ಸಮಿತಿ ಅಧ್ಯಕ್ಷ

ಚಿಕ್ಕನಾಯಕನಹಳ್ಳಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ/ಮಾಸಿಕ ಪ್ರಗತಿ ಪರಿಶೀಲನಾ (KDP) ಸಭೆಯಲ್ಲಿ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಜ್ವಲಂತ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿ, ತಾಲ್ಲೂಕಿನ ಪ್ರಮುಖ ಸಮಸ್ಯೆಗಳ ಕುರಿತು ಗಮನ ಸೆಳೆದು ಕೆಲ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

ಸಭೆಯಲ್ಲಿ ಆರೋಗ್ಯ, ಕುಡಿಯುವ ನೀರು, ಶಿಕ್ಷಣ, ಅರಣ್ಯ, ಕೃಷಿ, ಪುರಸಭೆ ಹಾಗೂ ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ಗಂಭೀರ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು:

ಶಿಕ್ಷಣ ಇಲಾಖೆಯ ಧೋರಣೆಗೆ ತೀವ್ರ ಆಕ್ರೋಶ: ಇತ್ತೀಚೆಗೆ ಶಾಲಾ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ. ವಿದ್ಯಾರ್ಥಿಗಳನ್ನು ಕೇವಲ ಅಂಕ ಗಳಿಸುವ ಯಂತ್ರಗಳಂತೆ ನೋಡಿ ಮಾನಸಿಕ ಒತ್ತಡ ಹೇರಲಾಗುತ್ತಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಮನಃಶಾಸ್ತ್ರಜ್ಞರಿಂದ ಸೂಕ್ತ ಕೌನ್ಸಿಲಿಂಗ್ ಕೊಡಿಸಿ ಸಾಮೂಹಿಕ ಒತ್ತಡದಿಂದ ಹೊರತರಲು ಬಿಇಒ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಶಿಕ್ಷಕರು, ಪೋಷಕರು ಮತ್ತು ಮಕ್ಕಳ ಕಠಿಣ ಶ್ರಮದಿಂದ ಬಂದ ಫಲಿತಾಂಶವನ್ನು ಮುಂದಿಟ್ಟುಕೊಂಡು, ಶಾಸಕರ ಜೊತೆ ತೆರಳಿ ಹಾರ-ಶಾಲು ಹಾಕಿಸಿಕೊಂಡು ಫೋಟೋ ತೆಗೆಸಿಕೊಳ್ಳುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇದು ಪ್ರಚಾರ ಪ್ರಿಯತೆಯೇ ಹೊರತು ಉತ್ತಮ ಅಧಿಕಾರಿಯ ಲಕ್ಷಣವಲ್ಲ ಎಂದು ಕ್ಷೇತ್ರದ ಶಿಕ್ಷಣಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬಸ್ ನಿಲ್ದಾಣದ ಒಳಗೆ ಕೆ.ಎಸ್.ಆರ್.ಟಿ.ಸಿ ಸಂಚಾರಕ್ಕೆ ಸೂಚನೆ:

ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಪುರಸಭಾ ಬಸ್ ನಿಲ್ದಾಣದ ಒಳಗಡೆ ಪ್ರವೇಶಿಸಿ ಸಂಚರಿಸುವಂತೆ ಸೂಕ್ತ ಕ್ರಮ ಕೈಗೊಳ್ಳಲು ಪುರಸಭೆ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಾಹಿತಿ ಕೇಳಿದ ಸದಸ್ಯರಿಗೆ ₹50,000 ನೋಟಿಸ್ – ಕ್ರಮಕ್ಕೆ ಆಗ್ರಹ : ಹುಳಿಯಾರು ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಮಾಹಿತಿ ಕೇಳಿದ್ದಕ್ಕೆ ಅಧಿಕಾರಿಗಳು ₹50 ಸಾವಿರ ಹಣ ಕಟ್ಟುವಂತೆ ನೋಟಿಸ್ ನೀಡಿರುವುದು ಸಂಪೂರ್ಣ ಕಾನೂನುಬಾಹಿರ. ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಭೆಯಲ್ಲಿ ಪಟ್ಟುಹಿಡಿದರು.

ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಪರಿಹಾರಕ್ಕೆ ಸೂಚನೆ: ತಾಲ್ಲೂಕಿನಲ್ಲಿ ಮಳೆ ಕೊರತೆ ಇರುವುದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು: ಸಭೆಯಲ್ಲಿ ಪ್ರಮುಖವಾಗಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ (EO) ಶಿವರಾಜಯ್ಯ ಹಾಗೂ ತಹಶೀಲ್ದಾರ್ ಮಮತ ಅವರು ಉಪಸ್ಥಿತರಿದ್ದರು.

ಇವರೊಂದಿಗೆ ನಾಮನಿರ್ದೇಶನ ಸದಸ್ಯರಾದ ರಾಮಚಂದ್ರಯ್ಯ ಸಿ.ಪಿ, ದೇವರಾಜು ಬಿ.ಎನ್‌, ಶೇಕ್‌ ಗೌಸ್‌ ಫೀರ್‌, ಶಂಕರ್‌ ಬಿ.ಕೆ, ತಾಲ್ಲೂಕು ಆಡಳಿತಾಧಿಕಾರಿ ಲಕ್ಷ್ಮಣ ಎಸ್.ಕಳ್ಳೆನ್ನವರ, ಯೋಜನಾಧಿಕಾರಿಗಳಾದ ಸಿದ್ದರಾಜು, ಸಹಾಯಕ ನಿರ್ದೇಶಕ (ಗ್ರಾ.ಉ) ಇಂದ್ರೇಶ್‌ ಜೆ.ಹೆಚ್, ವ್ಯವಸ್ಥಾಪಕರಾದ ಬಸವರಾಜು ಸೇರಿದಂತೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *