Share this... Whatsapp Facebook Pinterest Twitter Linkedin Gmail Printಬೆಂಗಳೂರು: ರಾಜ್ಯದಲ್ಲಿ 500 ಸರ್ಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಶಾಲೆ’ (KPS) ಗಳಾಗಿ ಅಭಿವೃದ್ಧಿಪಡಿಸಲು 1,750 ಕೋಟಿ ರೂ. ನೆರವು ಘೋಷಿಸಿರುವ ʻಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ʼ (ಎಡಿಬಿ) ಮತ್ತು ರಾಜ್ಯ ಸರ್ಕಾರ ಶುಕ್ರವಾರ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿವೆ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧುಬಂಗಾರಪ್ಪ ಅವರ ಸಮ್ಮುಖದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಎಡಿಬಿ ಬ್ಯಾಂಕಿನ ಅಧಿಕಾರಿಗಳು ಈ ಒಪ್ಪಂದಕ್ಕೆ ಸಹಿ ಹಾಕಿದರು. ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಅಂದರೆ 2029-30ನೇ ಸಾಲಿನ ಒಳಗೆ ರಾಜ್ಯ ಸರ್ಕಾರವು 2,500 ಕೋಟಿ ರೂ. ವಿನಿಯೋಗಿಸಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅಭಿವೃದ್ಧಿಪಡಿಸಲಿದೆ. ಇದಕ್ಕೆ ಎಡಿಬಿ ಬ್ಯಾಂಕ್ 1,750 ಕೋಟಿ ರೂ.ಗಳ ನೆರವು ನೀಡಲಿದೆ. ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಸಾಮರ್ಥ್ಯ ಹೊಂದಿರುವ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ಪ್ರತಿ ಶಾಲೆಯಲ್ಲೂ ಕನಿಷ್ಠ 1,200 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಾಮರ್ಥ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಎಡಿಬಿಯ ನೆರವಿನಿಂದ ಒಟ್ಟು 500 ಕೆಪಿಎಸ್ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತದೆ. https://x.com/DKShivakumar/status/2090755674754138263?ref_src=twsrc%5Etfw%7Ctwcamp%5Etweetembed%7Ctwterm%5E2090755674754138263%7Ctwgr%5Eb39d278d5dee6c2d4b3aec742317b9f9fc027fd0%7Ctwcon%5Es1_c10&ref_url=https%3A%2F%2Fwww.etvbharat.com%2Fkn%2Fstate%2Fadb-bank-signed-an-agreement-for-1750-crore-for-govt-school-development-kas26082105964 4 ವರ್ಷಗಳಲ್ಲಿ ಅನುಷ್ಠಾನ: “ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಅಂದರೆ 2029-30ನೇ ಸಾಲಿನ ಒಳಗೆ ರಾಜ್ಯ ಸರ್ಕಾರವು 2,500 ಕೋಟಿ ರೂ. ವಿನಿಯೋಗಿಸಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅಭಿವೃದ್ಧಿಪಡಿಸಲಿದೆ. ಇದಕ್ಕೆ ಎಡಿಬಿ ಬ್ಯಾಂಕ್ 1,750 ರೂ.ಗಳ ನೆರವು ಒದಗಿಸಲಿದೆ. ಉಳಿದ 750 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನೀಡಬೇಕಾಗುತ್ತದೆ. ಈ ಒಪ್ಪಂದಕ್ಕೆ ಸಹಿ ಮಾಡುವುದಕ್ಕೂ ಮೊದಲೇ ನಾನು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಒಪ್ಪಂದವನ್ನು ಅಂತಿಮಗೊಳಿಸಿದ್ದೇನೆ” ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. “ಎಡಿಬಿ ಬ್ಯಾಂಕ್ ಭಾರತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಆರ್ಥಿಕ ನೆರವು ನೀಡುತ್ತಿರುವುದು ಇದೇ ಮೊದಲು. ಅವರು ಈ ನೆರವು ಪ್ರಕಟಿಸುವುದಕ್ಕೂ ಮೊದಲೇ ನಮ್ಮ ಕೆಪಿಎಸ್ ಶಾಲೆಗಳ ಯೋಜನೆ, ಕಾರ್ಯಗತಗೊಳಿಸಲು ನಾವು ತೆಗೆದುಕೊಂಡಿರುವ ಕ್ರಮ, ನಮ್ಮ ಬದ್ಧತೆ ಪರಿಶೀಲಿಸಿದ್ದಾರೆ. ಅಲ್ಲದೇ, ನಾವು ಗುಣಮಟ್ಟದ ಶಿಕ್ಷಣ ನೀಡಲು ತೆಗೆದುಕೊಂಡಿರುವ ಕ್ರಮ ಬ್ಯಾಂಕಿನ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ” ಎಂದು ಸಚಿವರು ವಿವರಿಸಿದ್ದಾರೆ. “ದ್ವಿಭಾಷಾ ಶಿಕ್ಷಣ, ಮಕ್ಕಳ ಹಾಜರಾತಿ ದಾಖಲಿಸಲು ‘ನಿರಂತರ’ ಯೋಜನೆ ಜಾರಿ, ಬೃಹತ್ ಪ್ರಮಾಣದಲ್ಲಿ ಅಂದರೆ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತಿರುವುದು, ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ನಿರಂತರವಾಗಿ ನೀಡುತ್ತಿರುವ ತರಬೇತಿ, ಕಂಪ್ಯೂಟರ್ ಶಿಕ್ಷಣ ನೀಡಲು ವಿಶೇಷವಾಗಿ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ನೇಮಕ, ಎಐ ಕಲಿಸಲು ನಾವು ನಡೆಸಿರುವ ಸಿದ್ಧತೆ, ವೃತ್ತಿ ಮತ್ತು ಕೌಶಲ ಶಿಕ್ಷಣ, ಗ್ರಾಮೀಣ ಮಕ್ಕಳಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಮ್ಮ ಯೋಜನೆ ಎಲ್ಲವೂ ಈ ಮಹತ್ವದ ಒಪ್ಪಂದ ಏರ್ಪಡಲು ಕಾರಣವಾಗಿದೆ” ಎಂದು ಸಚಿವರು ಹೇಳಿದ್ದಾರೆ. “ಈಗಾಗಲೇ ನಾವು 100 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಅಭಿವೃದ್ಧಿಪಡಿಸಲು ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದೇವೆ. ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸುವ ಶಾಲೆಗಳನ್ನು ಗುರುತಿಸಲಾಗಿದೆ. ಸ್ಪಷ್ಟ ಮಾನದಂಡಗಳನ್ನು ಇಟ್ಟುಕೊಂಡು ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. “ಈಗಾಗಲೇ ಶೇ.15 ರಷ್ಟು ಅಂದರೆ 262.5 ಕೋಟಿ ರೂ.ಗಳನ್ನು ಎಡಿಬಿ ಬ್ಯಾಂಕ್ ನೆರವು ನೀಡಿದೆ. 2026-27 ನೇ ಸಾಲಿನಲ್ಲಿ ಶೇ.20.5 ಅಂದರೆ 358.75 ಕೋಟಿ ನೆರವು ನೀಡಲಿದೆ. 2027-28 ನೇ ಸಾಲಿನಲ್ಲಿ ಶೇ.22 ರಷ್ಟು ಅಂದರೆ 385 ಕೋಟಿ ರೂ. ಹಾಗೂ 2028-29 ಸಾಲಿನಲ್ಲಿ ಶೇ. 21.5 ರಷ್ಟು ಅಂದರೆ 376.25 ಕೋಟಿ ರೂ. ಮತ್ತು 2029-30 ನೇ ಸಾಲಿನಲ್ಲಿ 367.5 ಕೋಟಿ ರೂ. ನೆರವು ನೀಡಲಿದೆ” ಎಂದು ಸಚಿವರು ವಿವರಿಸಿದ್ದಾರೆ. Share this... Whatsapp Facebook Pinterest Twitter Linkedin Gmail Print Post navigation ಲೈಂಗಿಕ ದೌರ್ಜನ್ಯ ಪ್ರಕರಣ ಪ್ರಜ್ವಲ್ ರೇವಣ್ಣನಿಂದ ಮುಖ್ಯ ಸಾಕ್ಷಿಗೆ ಬೆದರಿಕೆ ಮಸೀದಿ ಚರ್ಚ್ ಗಳನ್ನ ಮುಜರಾಯಿಗೆ ಸೇರಿಸಿ: ವಿಶ್ವನಾಥ್ ದೀಕ್ಷಿತ್