ಹಾಸನ : ಕೆನರಾ ಬ್ಯಾಂಕ್, ಪ್ರಾದೇಶಿಕ ಕಚೇರಿ ಹಾಸನ ವತಿಯಿಂದ ಕೆನರಾ ವಿದ್ಯಾ ಜ್ಯೋತಿ ವಿದ್ಯಾರ್ಥಿವೇತನ ಯೋಜನೆ ಅಡಿಯಲ್ಲಿ ಬ್ಯಾಂಕಿನ CSR ಉಪಕ್ರಮದಂತೆ ಇಂದು ಕಾರ್ಯಕ್ರಮ ಆಯೋಜಿಸಿ 5 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಾಲಕಿಯರಿಗೆ ಶೈಕ್ಷಣಿಕ ಸಹಾಯ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿದ್ಯಾರ್ಥಿನಿಯರ ಖಾತೆಗೆ ನೇರ ವರ್ಗಾವಣೆ ಮಾಡುವುದರ ಜೊತೆಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಕುರಿತು ಮಾತನಾಡಿದ ತುಕಾರಾಮ್, AGM ಹಾಗೂ ಪ್ರಾದೇಶಿಕ ಕಚೇರಿ ಮುಖ್ಯಸ್ಥರು, ಹಾಸನ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡುವಂತೆ ತಿಳಿಸಿದರು. ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಬ್ಯಾಂಕಿನಿಂದ ನಿರಂತರ ಬೆಂಬಲ ದೊರೆಯಲಿದೆ ಎಂದು ಭರವಸೆ ನೀಡಿದರು.

ಮುಖ್ಯ ಅತಿಥಿಗಳಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲಾ, ಕೆನರಾ ಬ್ಯಾಂಕಿನ ಈ CSR ಉಪಕ್ರಮವನ್ನು ಶ್ಲಾಘಿಸಿದರು, ವಿವಿಧ ಸರ್ಕಾರಿ ಶಾಲೆಗಳ ಪ್ರತಿಭಾವಂತ ಬಾಲಕಿಯರ ಕಲ್ಯಾಣಕ್ಕಾಗಿ ಬ್ಯಾಂಕ್ ಕೈಗೊಂಡಿರುವ ಈ ಯೋಜನೆಯ ಪ್ರಯತ್ನಗಳನ್ನು ಅವರು ಪ್ರಶಂಸಿಸಿದರು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಲತಾ ಸರಸ್ವತಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ಕೆನರಾ ಬ್ಯಾಂಕಿನಲ್ಲಿ ಕೆನರಾ ವಿದ್ಯಾ ಜ್ಯೋತಿ ಎಂಬ ಹೆಸರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಮೀಪದ ಶಾಲೆಗಳಿಂದ ವಿದ್ಯಾರ್ಥಿನಿಯರು, ಪೋಷಕರು ಹಾಗೂ ಶಿಕ್ಷಕರು ಭಾಗವಹಿಸಿದ್ದರು, ಶಿಕ್ಷಕರು ಸಹ ಕೆನರಾ ಬ್ಯಾಂಕಿನ ಈ ಉತ್ತಮ ಉಪಕ್ರಮ ಹಾಗೂ ಸೇವೆಗಳಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಂದೀಪ್ ಸಿಂಗ್, DM ಲತಾ ಸರಸ್ವತಿ, LDM ಹಾಸನ ಪ್ರಾದೇಶಿಕ ಕಚೇರಿಯ ಕಿಶೋರ್ ಕುಮಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಹಾಸನ ನಗರದ ವಿವಿಧ ಶಾಖೆಗಳ ಶಾಖಾ ಮುಖ್ಯಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *